'ಪಡ್ಡೆಹುಲಿ' ಲವ್ವರ್ ಬಾಯ್ 'ವಿಷ್ಣು ಪ್ರಿಯ'ನಿಗೆ ಬರ್ತ್ ಡೇ ಸಂಭ್ರಮ..

ಭಾನುವಾರ, 5 ಏಪ್ರಿಲ್ 2020 (21:09 IST)
ಖ್ಯಾತ ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಮಂಜು ಈಗಾಗಲೇ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. 'ಪಡ್ಡೆಹುಲಿ' ಪಡ್ಡೆಹೈಕ್ಳನ್ನ ತನ್ನತ್ತ ತಿರುಗಿಸಿಕೊಂಡಿದ್ದ ಮಾಸ್ ಹೀರೋ, ಹೆಂಗಳೆಯರ ಮನಕದ್ದ ಚೋರನಾಗಿ ಮಿಂಚಿದ್ರು. ಇದೀಗ ಶ್ರೇಯಸ್ ಮಂಜು ಅವರ ಎರಡನೇ ಸಿನಿಮಾ 'ವಿಷ್ಣು ಪ್ರಿಯ'ದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಇಂದು ಶ್ರೇಯಸ್ ಹುಟ್ಟು ಹಬ್ಬದ ಸಂಭ್ರಮ. ಬರ್ತ್ ಡೇ ಬಾಯ್ ಗೆ ಚಿತ್ರತಂಡ ಕೂಡ ಒಂದೊಳ್ಳೆ ಗಿಫ್ಟ್ ಕೊಟ್ಟು, ಮನಸ್ಸಾರೆ ಶುಭ ಹಾರೈಸಿದ್ದಾರೆ.
 
ಎಸ್, ಸಿನಿಮಾ ಸೆಟ್ಟೇರಿದಾಗಿನಿಂದ ಸಾಕಷ್ಟು ವಿಚಾರಕ್ಕೆ ಸುದ್ದಿಯಲ್ಲಿತ್ತು. ಇದೀಗ ಹುಟ್ಟುಹಬ್ಬದ ಅಂಗವಾಗಿ, ಚಿತ್ರತಂಡ ಎರಡು ಪೋಸ್ಟರ್ ಗಳನ್ನು ಬಿಡುಗಡೆ ಮಾಡಿದ್ದು, ಶ್ರೇಯಸ್ ಮಂಜುಗೆ ಉಡುಗೊರೆ ನೀಡಿದೆ. ಪೋಸ್ಟರ್ ಸಖತ್ತಾಗಿದ್ದು, ಶ್ರೇಯಸ್ ಮಾಸ್ ಹೀರೋ ಆಗಿ ಮಿಂಚಿದ್ದಾರೆ. ಜೊತೆ ಪ್ರಿಯಾ ವಾರಿಯರ್ ಜೊತೆಗೆ ರೊಮ್ಯಾಂಟಿಕ್ ಆಗಿರುವಂತ ಪೋಸ್ಟರ್ ಕೂಡ ರಿಲೀಸ್ ಮಾಡಿದ್ದಾರೆ. ಪೋಸ್ಟರ್ ರಿಲೀಸ್ ಮಾಡಯವ ಮೂಲಕ ಚಿತ್ರತಂಡ ಶ್ರೇಯಸ್ ಗೆ ಶುಭ ಹಾರೈಸಿದ್ದಾರೆ.
 
ಕೆ. ಮಂಜುಗೆ ಸಾಹಸಿಂಹ ವಿಷ್ಣುವರ್ಧನ್ ಅಂದ್ರೆ ಎಲ್ಲಿಲ್ಲದ ಪ್ರೀತಿ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗೇ ಅವರ ಮಗ ಶ್ರೇಯಸ್ ಗೂ ಅದು ಬಳುವಳಿಯಾಗಿ ಬಂದಿದೆ. ಹಾಗಾಗಿಯೇ ವಿಷ್ಣುವರ್ಧನ್ ಅವರ ಮೇಲಿನ ಅಭಿಮಾನ ಸಿನಿಮಾದ ಟೈಟಲ್ ನಲ್ಲೂ ಕಾಣುತ್ತಿದೆ.
 
ಮಲೆಯಾಳಂ ಮೂಲದ, ಈಗಾಗಲೇ 25ಕ್ಕೂ ಹೆಚ್ಚು ಚಿತ್ರಗಳಿಗೆ ಆ್ಯಕ್ಷನ್‌ ಕಟ್‌ ಹೇಳಿರುವ, ಸಾವಿರಾರು ಜಾಹೀರಾತು ಚಿತ್ರಗಳನ್ನು ನಿರ್ದೇಶನ ಮಾಡಿರು ಮಲೆಯಾಳಂನ ಖ್ಯಾತ ನಿರ್ದೇಶಕ ವಿ ಕೆ ಪ್ರಕಾಶ್ 'ವಿಷ್ಣು ಪ್ರಿಯ' ಸಿನಿಮಾವನ್ನು ನಿರ್ದೇಶನ‌ ಮಾಡುತ್ತಿದ್ದಾರೆ. ಇದೊಂದು ನೈಜ ಘಟನೆ ಆಧಾರಿತ ಸಿನಿಮಾ ಎಂಬುದು ವಿಶೇಷ. ಈ ಸಿನಿಮಾದಲ್ಲಿ ಶ್ರೇಯಸ್‌ ಲವರ್‌ ಬಾಯ್‌ ಪಾತ್ರ ಮಾಡುತ್ತಿದ್ದಾರೆ. ಜೊತೆಗೆ ಮಾಸ್ ಲುಕ್ ನಲ್ಲೂ ಕಾಣಿಸಿಕೊಂಡಿದ್ದಾರೆ.
 
ಹೊಸ ಚಿತ್ರಕ್ಕೆ 1990ರ ಹಳೇ ರಂಗು
ಹೌದು ಸಿನಿಮಾದಲ್ಲಿ ಸಾಕಷ್ಟು ವಿಶೇಷತೆಗಳಿವೆ. ಮೊದಲ ಸಿನಿಮಾದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಶ್ರೇಯಸ್, ಎರಡನೇ ಸಿನಿಮಾ ಸೆಟ್ಟೇರಿದಾಗಿನಿಂದ ಸುದ್ದಿಯಲ್ಲೇ ಇದ್ದಾರೆ. ಇದೀಗ ಈ ಸಿನಿಮಾದಲ್ಲಿ ರೆಟ್ರೋ ಸ್ಟೈಲ್ ತರುತ್ತಿರುವುದು ಸಿನಿಮಾಗೆ ಮತ್ತಷ್ಟು ಮೆರಗನ್ನು ಹೆಚ್ಚಿಸುತ್ತಿದೆ.
 
ನಟ ಹಾಗೂ ನಟಿಗೆ ಹಳೇ ಕಾಲದ ವಸ್ತ್ರ ವಿನ್ಯಾಸಗಳನ್ನು ಮಾಡಲಾಗಿದೆ. ವಸ್ತ್ರ ವಿನ್ಯಾಸ, ಕೇಶ ವಿನ್ಯಾಸಗಳನ್ನು ಹಳೇ ಕಾಲಕ್ಕೆ ಹೊಂದಿಕೆಯಾಗುವಂತೆ ಮಾಡಲಾಗಿದ್ದು, ಶ್ರೇಯಸ್ ಹಾಗೂ ಪ್ರಿಯಾ ವಾರಿಯರ್ ಹೇಗೆ ಕಾಣಲಿದ್ದಾರೆಂಬ ಕ್ಯೂರಿಯಾಸಿಟಿ ಎಲ್ಲರಲ್ಲೂ ಮನೆ ಮಾಡಿದೆ. 1990ರ ವಿಷಯದೊಂದಿಗೆ ಚಿತ್ರವನ್ನು ಕೊಂಡೊಯ್ಯಲಾಗಿದೆಯಂತೆ.
 
ಸಿಂಧುಶ್ರೀ ಚಿತ್ರಕಥೆ ಬರೆದಿದ್ದು, ವಿಕೆ ಪ್ರಕಾಶ್ ಸಿನಿಮಾ ನಿರ್ದೇಶಿಸಿದ್ದಾರೆ. ಕೆ ಮಂಜು ಬಂಡವಾಳ ಹೂಡಿದ್ದಾರೆ. ಮಲೆಯಾಳಂ ಖ್ಯಾತ ಸಂಗೀತ ಮಾಂತ್ರಿಕ ಗೋಪಿ ಸುಂದರಂ ಸಂಗೀತ ನೀಡಿದ್ದು, ವಿನೋಧ್ ಭಾರತೀ ದೃಶ್ಯ ಸೆರೆ ಹಿಡಿದಿದ್ದಾರೆ. ಶ್ರೇಯಸ್ ಗೆ ನಾಯಕಿಯಾಗಿ ಮಲೆಯಾಳಂ ಬೆಡಗಿ ಪ್ರಿಯಾ ವಾರಿಯರ್ ನಟಿಸಿದ್ದಾರೆ.
 
ಬೆಂಗಳೂರು, ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಬೇಲೂರಿನ ಇತರೆಡೆ ಚಿತ್ರೀಕರಣ ಮುಗಿಸಿದ್ದು, ಕಡೆ ಹಂತದ ಚಿತ್ರೀಕರಣ ಬಾಕಿ ಉಳಿದಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ