ಬೆಟ್ಟಿಂಗ್ ಆ್ಯಪ್‌ಗೆ ಮೈಲೇಜ್‌ ನೀಡಿದ ಆರೋಪ: ಸೋನು ಗೌಡ ಸೇರಿ ರೀಲ್ಸ್ ಸ್ಟಾರ್‌ಗಳಿಗೆ ಪೊಲೀಸರ ಕ್ಲಾಸ್‌

Sampriya

ಮಂಗಳವಾರ, 8 ಏಪ್ರಿಲ್ 2025 (14:50 IST)
Photo Courtesy X
ಬೆಂಗಳೂರು: ಸೋನು ಶ್ರೀನಿವಾಸ್‌ಗೌಡ  ಸೇರಿದಂತೆ ನೂರಕ್ಕೂ ಅಧಿಕ ರೀಲ್ಸ್ ಸ್ಟಾರ್‌ಗಳಿಗೆ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಕ್ಲಾಸ್‌ ತೆಗೆದುಕೊಂಡಿದ್ದಾರೆ.
 ‌
ಮಾನ್ಯತೆಯಿಲ್ಲದ ಬೆಟ್ಟಿಂಗ್ ಆಪ್ ಬಗ್ಗೆ ಪ್ರಮೋಟ್ ಮಾಡಿದ ಆರೋಪದ ಮೇಲೆ ರೀಲ್ಸ್‌ ಸ್ಟಾರ್‌ಗಳನ್ನು ಸೈಬರ್ ಕ್ರೈಂ ಪೊಲೀಸರು ವಿಚಾರಣೆ ಒಳಪಡಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾಗ್ರಾಂ, ಯ್ಯೂಟೂಬ್‌ ಪೇಜ್‌ಗಳಲ್ಲಿ ಐಪಿಎಲ್ ಬೆಟ್ಟಿಂಗ್ ಸಂಬಂಧ ಜಾಹೀರಾತು ಬಿತ್ತರಿಸಿದ್ದ ರೀಲ್ಸ್ ಸ್ಟಾರ್‌ಗಳಿಗೆ ಶಾಕ್‌ ನೀಡಲಾಗಿದೆ.

ತಮ್ಮ ಪೇಜ್‌ಗಳಲ್ಲಿ ಬಿತ್ತರಿಸಿದ್ದ ಜಾಹೀರಾತುಗಳು ಜನರಿಗೆ ವಂಚಿಸುವ ಜಾಹೀರಾತುಗಳು ಆಗಿದ್ದವು. ಹಾಗಾಗಿ ವಕೀಲರೊಬ್ಬರು ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ ದೂರು ಕೊಟ್ಟಿದ್ದರು. ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಜನರಿಗೆ ವಂಚಿಸುವ ಜಾಹೀರಾತು ಪ್ರಕಟಿಸಿದ್ದ ರೀಲ್ಸ್ ಸ್ಟಾರ್‌ಗಳ ಪಟ್ಟಿ ಮಾಡಿ ಸೈಬರ್ ಕ್ರೈಂ ಪೊಲೀಸರು ನೋಟಿಸ್ ನೀಡಿದ್ದರು.  

ರೀಲ್ಸ್‌ ಸ್ಟಾರ್‌ಗಳಾದ ಸೋನು ಶ್ರೀನಿವಾಸ್‌ಗೌಡ, ದೀಪಕ್‌ಗೌಡ, ವರುಣ್ ಆರಾದ್ಯ, ದಚ್ಚು ಸೇರಿ ನೂರಕ್ಕು ಹೆಚ್ಚು ಮಂದಿ ರೀಲ್ಸ್ ಸ್ಟಾರ್‌ಗಳಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಿದ್ದಾರೆ. ವಿಚಾರಣೆಗೆ ಹಾಜರಾದ ಸ್ಟಾರ್‌ಗಳು ಇನ್ನು ಮುಂದೆ ಇಂತಹ ಜಾಹೀರಾತುಗಳನ್ನ ನಾವು ಪ್ರಕಟಿಸುವುದಿಲ್ಲ. ಈ ಜಾಹೀರಾತು ಪ್ರಕಟಿಸುವುದರಿಂದ ಜನರಿಗೆ ಸಮಸ್ಯೆ ಆಗುತ್ತದೆ ಎಂಬ ಅರಿವಿಲ್ಲದೇ ನಾವು ಪ್ರಕಟಿಸಿದ್ದೇವೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ