ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 50 ನೇ ಜನ್ಮ ಜಯಂತಿ ಇಂದು. ಈ ದಿನ ಅಭಿಮಾನಿಗಳ ಪ್ರೀತಿಯ ಅಪ್ಪು ಕುರಿತಾದ ಇಂಟ್ರೆಸ್ಟಿಂಗ್ ವಿಚಾರಗಳ ಬಗ್ಗೆ ತಿಳಿದುಕೊಳ್ಳೋಣ.
ಶೂಟಿಂಗ್ ಗೆ ಹೋದಾಗ ಈ ಕೆಲಸ ಮಾಡುತ್ತಿದ್ದರು
ಪುನೀತ್ ರಾಜ್ ಕುಮಾರ್ ಯಾರಿಗೂ ಗೊತ್ತಾಗದ ಹಾಗೆ ಎಷ್ಟೋ ಜನರಿಗೆ ಸಹಾಯ ಮಾಡುತ್ತಿದ್ದರು. ಅವರ ಸಾವಿನ ಬಳಿಕ ಅವರ ಬಗ್ಗೆ ಒಂದೊಂದೇ ವಿಚಾರಗಳು ಹೊರಬಿದ್ದಿದ್ದವು. ಯಾವುದೇ ಹಳ್ಳಿಗಳಲ್ಲಿ ಚಿತ್ರೀಕರಣ ನಡೆದರೆ ಪುನೀತ್ ಮೊದಲು ಆ ಭಾಗದ ಸರ್ಕಾರೀ ಶಾಲೆ ಬಗ್ಗೆ ತಿಳಿದುಕೊಳ್ಳುತ್ತಿದ್ದರಂತೆ. ಬಳಿಕ ಆ ಶಾಲೆಗೆ ಏನು ಬೇಕು ಎಂದು ಕೇಳಿತಿಳಿದುಕೊಂಡು ಅದನ್ನು ಪೂರೈಸುತ್ತಿದ್ದರಂತೆ. ಒಂದು ವೇಳೆ ಶಾಲೆಗೆ ಏನಾದರೂ ವಸ್ತು ಅಥವಾ ವ್ಯವಸ್ಥೆ ಮಾಡಿಕೊಟ್ಟರೆ ಮುಂದೆ ಅದರ ಖರ್ಚು ವೆಚ್ಚ ನಿರ್ವಹಣೆಗಾಗಿ ಒಂದಷ್ಟು ದುಡ್ಡು ಎಫ್ ಡಿ ಮಾಡಿಕೊಡುತ್ತಿದ್ದರಂತೆ.
ದುಡಿಮೆಯ ಕಾಲು ಭಾಗ ದಾನಕ್ಕೆ
ಪುನೀತ್ ತಮ್ಮ ಸಿನಿಮಾಗೆ 4-5 ಕೋಟಿ ಸಂಭಾವನೆ ಪಡೆಯುತ್ತಿದ್ದರು. ಇದರಲ್ಲಿ ಕಾಲು ಭಾಗವನ್ನು ದಾನ ಮಾಡಲೆಂದೇ ಮೀಸಲಾಗಿಟ್ಟಿದ್ದರಂತೆ. ಅದನ್ನು ನಿರ್ಮಾಪಕರು ಕೆದಕಿ ಕೇಳಿದಾಗ ಹೇಳಿದ್ದರಂತೆ.
ಯಾರಿಗೇ ಹಣ ಸಹಾಯ ಮಾಡಿದರೂ ಕಂಡೀಷನ್
ಕಷ್ಟದಲ್ಲಿರುವವರು ಯಾರೇ ಬಂದರೂ ಬರಿಗೈಯಲ್ಲಿ ಕಳುಹಿಸಿದವರಲ್ಲ. ಯಾರಿಗೇ ಸಹಾಯ ಮಾಡಿದರೂ ಅದನ್ನು ಯಾರಿಗೂ ಹೇಳಬೇಡಿ ಎಂದು ಷರತ್ತು ವಿಧಿಸಿದೇ ಮಾಡುತ್ತಿದ್ದರು.
ಆಫೀಸರ್ ಆಗಬೇಕೆಂದುಕೊಂಡಿದ್ದ ಅಪ್ಪು
ಚಿಕ್ಕವರಿದ್ದಾಗಿನಿಂದಲೂ ಅಪ್ಪು ಅವರಿಗೆ ಗನ್ ಮೇಲೆ ವಿಪರೀತ ಮೋಹ. ಸಾಕಷ್ಟು ಆಟಿಕೆ ಗನ್ ಗಳನ್ನು ಇಟ್ಟುಕೊಂಡಿದ್ದರಂತೆ. ದೊಡ್ಡವನಾದ ಮೇಲೆ ಎಲ್ಲರನ್ನೂ ಕಂಟ್ರೋಲ್ ಮಾಡುವ, ಎಲ್ಲರಿಗೂ ಆದೇಶ ಕೊಡುವಷ್ಟು ದೊಡ್ಡ ಪೊಲೀಸ್ ಆಫೀಸರ್ ಆಗಬೇಕು ಎಂದುಕೊಂಡಿದ್ದರಂತೆ. ಇದನ್ನು ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಿದ್ದರು.