ಪುಟ್ಟಣ್ಣ ಕಣಗಾಲ್ರ ಸ್ಫೂರ್ತಿಯೊಂದಿಗೆ ಮತ್ತೆ ಕಥಾ ಸಂಗಮ!

ಬುಧವಾರ, 4 ಡಿಸೆಂಬರ್ 2019 (13:50 IST)
ಶ್ರೀದೇವಿ ಎಂಟರ್ಪ್ರೈಸಸ್ ಬ್ಯಾನರಿನಡಿಯಲ್ಲಿ ಹೆಚ್.ಕೆ ಪ್ರಕಾಶ್, ಪ್ರದೀಪ್ ಎನ್ ಆರ್ ಮತ್ತು ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ಚಿತ್ರ ಕಥಾ ಸಂಗಮ. ಈ ಚಿತ್ರ ಇದೇ ಡಿಸೆಂಬರ್ 6ರಂದು ಅದ್ದೂರಿಯಾಗಿ ಬಿಡುಗಡೆಗೊಳ್ಳಲಿದೆ. ಕಥಾ ಸಂಗಮ ಎಂದರೆ ಕನ್ನಡದ ಪ್ರೇಕ್ಷಕರಿಗೆ ಸಾರ್ವಕಾಲಿಕ ಹಿಟ್ ಎಂಬಂಥಾ ಒಂದಷ್ಟು ಚಿತ್ರಗಳು ನೆನಪಾಗುತ್ತವೆ. ಅವರ ಪ್ರಯೋಗಶೀಲತೆಗೆ ಕನ್ನಡಿ ಹಿಡಿದಂಥಾ ಕಥಾ ಸಂಗಮ ಚಿತ್ರವಂತೂ ನೆನಪಾಗದಿರಲು ಸಾಧ್ಯವೇ ಇಲ್ಲ. ಇದೀಗ ಕಣಗಾಲರ ಸ್ಫೂರ್ತಿಯೊಂದಿಗೆ ಹೊಸಾ ಕಥಾ ಸಂಗಮ ರೆಡಿಯಾಗಿ ಬಿಡುಗಡೆಯ ಹೊಸ್ತಿಲಲ್ಲಿದೆ. ಈಗಾಗಲೇ ಭಾರೀ ನಿರೀಕ್ಷೆಗೆ ಕಾರಣವಾಗಿರುವ ಈ ಚಿತ್ರ ಇದೇ ಡಿಸೆಂಬರ್ 6ರಂದು ಬಿಡುಗಡೆಯಾಗುತ್ತಿದೆ.
ಎಪ್ಪತ್ತರ ದಶಕದಲ್ಲಿಯೇ ಕಣಗಾಲರು ಅದೆಷ್ಟೋ ವರ್ಷಗಳಷ್ಟು ಮುಂದಕ್ಕೆ ಯೋಚನೆ ಮಾಡಿ ನಿರ್ಧೇಸಿಸಿದ್ದ ಚಿತ್ರ ಕಥಾ ಸಂಗಮ. ಅದರಲ್ಲಿ ಅವರು ನಾಲಕ್ಕು ಕಥೆಗಳನ್ನು ಕಟ್ಟಿ ಕೊಡುವ ಮೂಲಕ ಅಚ್ಚರಿಗೆ ಕಾರಣವಾಗಿದ್ದರು. ಮಹಾ ಗೆಲುವನ್ನೂ ದಾಖಲಿಸಿದ್ದರು. ಇದೀಗ ರಿಷಬ್ ಶೆಟ್ಟಿ ಹೊಸಾ ಕಥಾ ಸಂಗಮದಲ್ಲಿ ಬರೋಬ್ಬರಿ ಏಳು ಕಥೆಗಳನ್ನು ಹೇಳ ಹೊರಟಿದ್ದಾರೆ. ಇಲ್ಲಿ ಏಳು ಮಂದಿ ಯುವ ನಿರ್ದೇಶಕರು ಏಳು ಭಿನ್ನ ಬಗೆಯ ಕಥೆಗಳನ್ನು ನಿರ್ದೇಶನ ಮಾಡಿದ್ದಾರೆ. ಅವೆಲ್ಲವೂ ಭಿನ್ನ ಗುಣ ಲಕ್ಷಣಗಳನ್ನು ಹೊಂದಿರೋ ಕಥೆಗಳು. ಅದರಲ್ಲಿ ಚಿತ್ರವಿಚಿತ್ರ ಪಾತ್ರಗಳಿವೆ. ಅಂಥಾದ್ದೇ ತಿರುವುಗಳಿವೆಯಂತೆ.
ರಿಷಬ್ ಶೆಟ್ಟರಲ್ಲಿ ಇಂಥಾದ್ದೊಂದು ಭಿನ್ನ ಐಡಿಯಾ ಟಿಸಿಲೊಡೆದದ್ದೇ ಪುಟ್ಟಣ್ಣ ಕಣಗಾಲರ ಸ್ಫೂರ್ತಿಯಿಂದ. ಆದ್ದರಿಂದಲೇ ಈ ಚಿತ್ರವನ್ನವರು ಅವರಿಗೇ ಅರ್ಪಿಸಿ ಗೌರವ ಸಲ್ಲಿಸಿದ್ದಾರೆ. ಕಿರಣ್ ರಾಜ್ ಕೆ, ಶಶಿಕುಮಾರ್ ಪಿ, ಚಂದ್ರಜಿತ್ ಎಲಿಯಪ್ಪ, ರಾಹುಲ್ ಪಿ.ಕೆ, ಜೈ ಶಂಕರ್, ಕರಣ್ ಅನಂತ್, ಜಮದಗ್ನಿ ಮನೋಜ್ ಎಂಬ ಏಳು ಮಂದಿ ಪ್ರತಿಭಾವಂತ ನಿರ್ದೇಶಕರನ್ನು ರಿಷಬ್ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ರಿಷಬ್ ಶೆಟ್ಟಿ, ಹರಿಪ್ರಿಯಾ, ರಾಜ್ ಬಿ ಶೆಟ್ಟಿ, ಕಿಶೋರ್ ಕುಮಾರ್, ಪ್ರಮೋದ್ ಶೆಟ್ಟಿ, ಯಜ್ಞಾ ಶೆಟ್ಟಿ, ಪ್ರಕಾಶ್ ಬೆಳವಾಡಿ, ಬಾಲಾಜಿ ಮನೋಹರ್ ಮುಂತಾದವರು ಈ ಏಳೂ ಕಥೆಗಳ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇದರ ನಿಜವಾದ ಸಾರ ಎಲ್ಲರ ಮುಂದೆ ಅನಾವರಣಗೊಳ್ಳಲು ಕ್ಷಣಗಣನೆ ಶುರುವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ