ಬೆಂಗಳೂರು: ಅಮೃತಧಾರೆ ಸೀರಿಯಲ್ ಖ್ಯಾತಿಯ ನಟ ರಾಜೇಶ್ ನಟರಂಗ ಇತ್ತೀಚೆಗೆ ಡಾ ರಾಜ್ ಕುಮಾರ್ ಬಾಳಿ ಬದುಕಿದ ಗಾಜನೂರಿನ ಮನೆಗೆ ಹೋಗಿ ಫೋಟೋ ತೆಗೆಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದರ ಹಿಂದಿನ ಇಂಟ್ರೆಸ್ಟಿಂಗ್ ಕಹಾನಿಯನ್ನು ಅವರು ಸುವರ್ಣ ನ್ಯೂಸ್ ಜೊತೆಗಿನ ಸಂದರ್ಶನದಲ್ಲಿ ವಿವರಿಸಿದ್ದಾರೆ. ಜೊತೆಗೆ ಅಣ್ಣಾವ್ರ ಜೊತೆಗಿನ ತಮ್ಮ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ.
ಅಣ್ಣಾವ್ರು ಗುಪ್ತಗಾಮಿನಿ ಸೀರಿಯಲ್ ನೋಡ್ತಿದ್ರು. ಅಶೋಕ್ ಅವರ ಮೂಲಕ ಹೇಳಿ ಕಳಿಸಿದ್ರು. ಆಗ ಈಟಿವಿಯಲ್ಲಿ ಗುಪ್ತಾಮಿನಿ ಸೀರಿಯಲ್ ಬರ್ತಿತ್ತು. ಆ ಚಾನೆಲ್ ಗೆ ಅಡಿಕ್ಟ್ ಆಗಿ ಬಿಟ್ಟಿದ್ರು ಅವರು. ಅಶೋಕ್ ಅವರ ಮೂಲಕ ನಂಗೆ ಅಣ್ಣಾವ್ರು ಹೇಳಿಕಳಿಸಿದ್ರು. ಒಮ್ಮೆ ಅವರನ್ನು ಮನೆಗೆ ಕರೆದುಕೊಂಡು ಬನ್ನಿ ಅಂದಿದ್ದರಂತೆ. ಅಶೋಕ್ ಅವರು ಒಮ್ಮೆ ನಾನು ಮೇಕಪ್ ಹಾಕಿಕೊಂಡು ಕೂತಿದ್ದಾಗ ಬಂದು ಹೇಳಿದ್ರು ದೊಡ್ಮನೆಯಿಂದ ಕರೆ ಬಂದಿದೆ. ಹೋಗಬೇಕಂತೆ ಅಂತ. ನಾನು ಓಕೆ ಅಂದಿದ್ದೆ ಆದರೆ ಹೋಗಕ್ಕೆ ಆಗಿರಲಿಲ್ಲ. ಯಾಕೆ ಅಂತ ಇಲ್ಲಿ ತನಕ ಗೊತ್ತಾಗಲಿಲ್ಲ ನನಗೆ.
ಯಾವ ಲೆವೆಲ್ ಗೆ ನತದೃಷ್ಟ ನಾನು ಎಂದರೆ ಕುಮಾರರಾಮ ಸಿನಿಮಾಗೆ ನಾನು ಮೇಕಪ್ ಹಾಕಿಕೊಂಡಿದ್ದೆ. ಮುಹೂರ್ತಕ್ಕೆ ಬಂದ್ರು. ನಾನು ಕಾಲಿಗೆ ಬಿದ್ದು ನಮಸ್ಕಾರ ಮಾಡಲು ಹೋದೆ. ಆದರೆ ಅವರು ಕಲಾವಿದರಿಗೆ ಎಷ್ಟು ಮರ್ಯಾದೆ ಕೊಡ್ತಾರೆ ಗೊತ್ತಲ್ವಾ? ನೀವೂ ಕಲಾವಿದರೇ ಎಂದು ನಮಸ್ಕಾರ ಮಾಡಲು ಬಿಡಲಿಲ್ಲ.
ಕೊನೆಗೆ ಡಾ ರಾಜ್ ಕುಮಾರ್ ತೀರಿಕೊಂಡ ದಿನವೂ ನಾನು ಅವರನ್ನು ಕೊನೆಯ ಬಾರಿ ನೋಡಬೇಕು ಎಂದು ಹೋದೆ. ಹೋಗಲು ಆಗಲೇ ಇಲ್ಲ. ಅಲ್ಲಿ ಅಷ್ಟು ಜನ. ಪೊಲೀಸರು ಕೈ ಮುಗಿದು ಕೇಳಿದ್ರು ದಯವಿಟ್ಟು ಹೋಗಿ ಸರ್. ಇಲ್ಲಿ ಇರಕ್ಕಾಗಲ್ಲ ನಾವೇ ಸಾಯ್ತೀವಿ ಎಂದಿದ್ದರು. ಕೊನೆಗೆ ಅವರ ಅಂತ್ಯಕ್ರಿಯೆಯಲ್ಲಾದರೂ ಭಾಗಿಯಾಗೋಣ ಎಂದು ಸಾಕಷ್ಟು ಜನರ ಮೂಲಕ ಪ್ರಯತ್ನಿಸಿದೆ. ಆಗಲೇ ಇಲ್ಲ.
ಒಮ್ಮೆ ಕಂಠೀರವ ಸ್ಟುಡಿಯೋದಲ್ಲಿ ಗುಪ್ತಗಾಮಿನಿ ಸೀರಿಯಲ್ ಶೂಟಿಂಗ್ ಮಾಡ್ತಿದ್ದೆ. ಪಾರ್ವತಮ್ಮನವರು ಕಾರಲ್ಲಿ ಬಂದಿದ್ದರು. ನನ್ನನ್ನು ಕರೆದು ಹೇಳಿದ್ರು ಅಪ್ಪಾಜಿಗೆ ನಿಮ್ಮನ್ನು ತುಂಬಾ ಇಷ್ಟ ಇತ್ತು ಅಂತ. ಹೌದು ಗೊತ್ತಮ್ಮ ನನಗೆ ಬರಕ್ಕೆ ಆಗಲೇ ಇಲ್ಲ ಎಂದೆ. ಆಗ ನನಗೂ ನಿಮ್ಮನ್ನು ತುಂಬಾ ಇಷ್ಟ, ಯಾವುದಾದ್ರೂ ಪಾತ್ರ ಇದ್ರೆ ಹೇಳಿ ಒಂದು ಪಾತ್ರ ಮಾಡಿ ಎಂದು ಕೇಳಿದ್ರು. ಖಂಡಿತಾ ಮಾಡ್ತೀನಮ್ಮಾ ಎಂದಿದ್ದೆ. ಅವರನ್ನು ಕೊನೆಗೂ ನೋಡಕ್ಕೆ ಆಗಲೇ ಇಲ್ಲ. ಕೊನೆಗೆ ಮೊನ್ನೆ ಅವರ ಗಾಜನೂರಿನ ಮನೆಗೆ ಹೋಗಿ ಬಂದೆ ಎಂದು ರಾಜೇಶ್ ನಟರಂಗ ಹೇಳಿದ್ದಾರೆ.