ಅಡ್ವಾನ್ಸ್ ಬುಕಿಂಗ್ ನಲ್ಲೇ ಸಲಾರ್ ಅಬ್ಬರ: ಬಿಡುಗಡೆಗೆ ಮುನ್ನವೇ ಭರ್ಜರಿ ಗಳಿಕೆ

ಬುಧವಾರ, 22 ನವೆಂಬರ್ 2023 (10:30 IST)
ಹೈದರಾಬಾದ್: ಹೊಂಬಾಳೆ ಫಿಲಂಸ್ ನಿರ್ಮಾಣದ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಸಲಾರ್. ಪ್ರಭಾಸ್ ನಾಯಕರಾಗಿರುವ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಇದೇ ಡಿಸೆಂಬರ್ 22 ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಪ್ರಶಾಂತ್ ನೀಲ್ ನಿರ್ದೇಶನ, ಹೊಂಬಾಳೆ ಫಿಲಂಸ್ ನಿರ್ಮಾಣ ಎಂದರೆ ಕೇಳಬೇಕೇ? ಅದರಲ್ಲೂ ಪ್ರಭಾಸ್ ಸಿನಿಮಾ ಎಂದರೆ ನೋಡಲು ಕಾಯುವ ಪ್ರತ್ಯೇಕ ವರ್ಗವೇ ಇದೆ. ಹೀಗಿರುವಾಗ ಸಲಾರ್ ಸಿನಿಮಾಗೆ ಸಹಜವಾಗಿಯೇ ಬಿಡುಗಡೆಗೂ ಮುನ್ನವೇ ಭಾರೀ ಬೇಡಿಕೆಯಿದೆ.

ಕೇವಲ ಭಾರತದಲ್ಲಿ ಮಾತ್ರವಲ್ಲ, ದೂರದ ಅಮೆರಿಕಾದಲ್ಲಿ ಚಿತ್ರ ಭರ್ಜರಿ ಹಿಟ್ ಆಗಲಿದೆ ಎಂಬುದು ಈಗಾಗಲೇ ಸಾಬೀತಾಗಿದೆ. ಬಿಗ್ ಬಜೆಟ್ ಸಿನಿಮಾವಾಗಿರುವ ಸಲಾರ್ ಚಿತ್ರದ ಅಡ್ವಾನ್ಸ್ ಬುಕಿಂಗ್ ಶುರುವಾಗಿದ್ದು, ಅಮೆರಿಕಾದಲ್ಲೂ ಭಾರೀ ಬೇಡಿಕೆ ಬಂದಿದೆ. ಈಗಾಗಲೇ ಮುಂಗಡ ಬುಕಿಂಗ್ ಮೂಲಕ ಕೋಟಿ ವ್ಯವಹಾರವಾಗಿದೆ.

ಟ್ರೈಲರ್ ಬಿಡುಗಡೆಗೂ ಮುನ್ನವೇ ಈ ಪರಿ ಕ್ರೇಜ್ ನೋಡಿದರೆ ಚಿತ್ರ ಮೊದಲ ದಿನವೇ ಬಾಕ್ಸ್ ಆಫೀಸ್ ದಾಖಲೆ ದೂಳೀಪಟ ಮಾಡುವುದರಲ್ಲಿ ಅನುಮಾನವಿಲ್ಲ. ಡಿಸೆಂಬರ್ 10 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

ಸಲಾರ್ ಮೂಲಕ ಪ್ರಭಾಸ್ ಭರ್ಜರಿ ಬ್ರೇಕ್ ನ ನಿರೀಕ್ಷೆಯಲ್ಲಿದ್ದಾರೆ. ಬಾಹುಬಲಿ 2 ಸಿನಿಮಾ ಬಳಿಕ ಪ್ರಭಾಸ್ ನಾಯಕರಾಗಿರುವ ಯಾವುದೇ ಸಿನಿಮಾವೂ ನಿರೀಕ್ಷಿಸಿದಷ್ಟು ಯಶಸ್ವಿಯಾಗಿರಲಿಲ್ಲ. ಸಾಹೋ, ರಾಧೇ ಶ್ಯಾಮ್, ಆದಿಪುರುಷ್ ಎಲ್ಲವೂ ಪ್ರೇಕ್ಷಕರಿಗೆ ಅಷ್ಟೊಂದು ಇಷ್ಟವಾಗಿಲ್ಲ. ಹೀಗಾಗಿ ಸಲಾರ್ ಮತ್ತೆ ತಮಗೆ ಯಶಸ್ಸು ತಂದುಕೊಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ