ರಿಷಿಗೆ ಮತ್ತೆ ವಿದ್ಯಾರ್ಥಿಯಾಗೋ ಸುವರ್ಣಾವಕಾಶ!

ಗುರುವಾರ, 19 ಡಿಸೆಂಬರ್ 2019 (17:57 IST)
ಆಪರೇಷನ್ ಅಲಮೇಲಮ್ಮ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟ ರಿಷಿ ಇದೀಗ ಕನ್ನಡ ಚಿತ್ರರಂಗದಲ್ಲಿ ಪ್ರತಿಭಾನ್ವಿತ ನಟನಾಗಿ ಗುರುತಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಒಂದಷ್ಟು ನಟರಿಗೆ ಇಂಥಾ ಪಾತ್ರಗಳಾದರೆ ಮಾತ್ರವೇ ಫಿಟ್ ಆಗಿರುತ್ತದೆ ಎಂಬಂಥಾ ವಾತಾವರಣವಿರುತ್ತದೆ.

ಆದರೆ ರಿಷಿಯದ್ದು ಅದನ್ನು ಮೀರಿಕೊಂಡಿರುವ ಪ್ರತಿಭೆ. ಕಾಮಿಡಿ ಸೇರಿದಂತೆ ಅದೆಂಥಾದ್ದೇ ಪಾತ್ರ ಸಿಕ್ಕರೂ ನುಂಗಿಕೊಂಡು ನಟಿಸುವ ಪ್ರತಿಭೆ ಅವರಿಗೆ ಸಿಕ್ಕಿದೆ. ಚಿತ್ರರಂಗಕ್ಕೆ ಬಂದು ಕೆಲವೇ ಕೆಲ ವರ್ಷಗಳಾದರೂ ಥರ ಥರದ ಪಾತ್ರಗಳಲ್ಲಿ ನಟಿಸಿರುವ ರಿಷಿ ಸಾರ್ವಜನಿಕರಿಗೆ ಸುವರ್ಣಾವಕಾಶದಲ್ಲಿ ಮತ್ತೆ ವಿದ್ಯಾರ್ಥಿಯಾಗುವ ಸುವರ್ಣಾವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.
 
ಅನೂಪ್ ರಾಮಸ್ವಾಮಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಈ ವಾರವೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ಬಹಳಷ್ಟು ಕನಸಿಟ್ಟುಕೊಂಡು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಕಥೆಗಳು ಮಾತ್ರವಲ್ಲದೇ ಪ್ರತೀ ಪಾತ್ರಗಳನ್ನು ಕೂಡಾ ಭಿನ್ನವಾಗಿಯೇ ನಿರ್ದೇಶಕ ಅನೂಪ್ ರೂಪಿಸಿದ್ದಾರೆ. ಸಿಂಪಲ್ ಸುನಿ ಗರಡಿಯಲ್ಲಿ ಪಳಗಿಕೊಂಡಿರುವ ಅವರು ಒಂದೊಳ್ಳೆ ಕಥೆಯೊಂದಿಗೇ ಈ ಚಿತ್ರವನ್ನು ರೂಪಿಸಿದ್ದಾರೆ.
ಇದುವರೆಗೂ ಥರ ಥರದ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ರಿಷಿ, ಈ ಚಿತ್ರದ ಮೂಲಕ ವಿದ್ಯಾರ್ಥಿಯಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಅವರದ್ದಿಲ್ಲಿ ತುಂಬಾನೇ ಲವಲವಿಕೆ ಹೊಂದಿರೋ ಪಾತ್ರ. ವಿದ್ಯಾರ್ಥಿಯಾದರೂ ಅವರ ಪಾತ್ರಕ್ಕೆ ನಾನಾ ಶೇಡುಗಳಿವೆಯಂತೆ. ನಾಯಕಿಯೊಂದಿಗೆ ಡೀಪ್ ಆಗಿ ಲವ್ವಲ್ಲಿ ಬೀಳುವ ಈತನಿಗೆ ಆಕೆಗಿರೋ ಒಂದು ಕಾಯಿಲೆಯೂ ಸವಾಲಾಗುತ್ತದೆ. ಈ ನಡುವೆ ಆತ ಒಂದು ಇಕ್ಕಟ್ಟಿನ ಪರಿಸ್ಥಿತಿಗೂ ಸಿಲುಕಿಕೊಳ್ಳುತ್ತಾನೆ. ಇದೆಲ್ಲದರಿಂದ ನಾಯಕ ಹೇಗೆ ಪಾರಾಗುತ್ತಾನೆಂಬುದನ್ನು ಕಾಮಿಡಿ ಧಾಟಿಯಲ್ಲಿಯೇ ಹೇಳಲಾಗಿದೆಯಂತೆ. ಹಾಗಂತ ಇಲ್ಲಿ ಬರೀ ಕಾಮಿಡಿ ಮಾತ್ರವೇ ಇಲ್ಲ. ಕಣ್ಣು ತೋಯುವಂಥಾ ಸನ್ನಿವೇಶಗಳೂ ಇಲ್ಲಿವೆ. ಅದೆಲ್ಲವೂ ಈ ವಾರವೇ ನಿಮ್ಮೆಲ್ಲರ ಮುಂದೆ ಅನಾವರಣಗೊಳ್ಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ