ಬೆಂಗಳೂರು: ಮಲಯಾಳಂನಲ್ಲಿ ಹೇಮಾ ಕಮಿಟಿ ವರದಿ ಹೊರಬಿದ್ದು ಸಂಚಲನ ಮೂಡಿಸುತ್ತಿರುವ ಬೆನ್ನಲ್ಲೇ ಇದೀಗ ಕನ್ನಡ ಚಿತ್ರರಂಗದಲ್ಲೂ ಇದೇ ರೀತಿಯ ಸಮಿತಿ ರಚಿಸುವಂತೆ ಸಿಎಂಗೆ ಮನವಿ ಮಾಡಲಾಗಿದೆ.
ಕೇರಳ ಆಯ್ತು ಇದೀಗ ಕನ್ನಡ ಚಿತ್ರರಂಗದಲ್ಲೂ ಮೀಟೂ ಸದ್ದು ಶುರುವಾಗಿದೆ. ಕನ್ನಡ ಸಿನಿಮಾ ರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯ ಸೇರಿದಂತೆ ಇತರ ಸಮಸ್ಯೆಗಳ ಬಗ್ಗೆ ಹಂಚಿಕೊಳ್ಳಲು ಸಮಿತಿಯನ್ನು ರಚಿಸುವಂತೆ ಒತ್ತಾಯಿಸಲಾಗಿದೆ. ಈಗಾಗಲೇ ಈ ಮನವಿ ಪತ್ರಕ್ಕೆ ಕನ್ನಡ ಸಿನಿಮಾರಂಗದ 153 ಗಣ್ಯರು ಸಹಿ ಮಾಡಿದ್ದಾರೆ.
ಮನವಿಯಲ್ಲಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಹೇಳಲಾಗಿದೆ. ಇದರಿಂದ ಕನ್ನಡ ಚಿತ್ರರಂಗದಲ್ಲಿ ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ತನಿಖೆಯಾಗಲಿ ಎಂದು ನಟ ಕಿಚ್ಚ ಸುದೀಪ್, ನಟಿ ರಮ್ಯಾ, ನಟ ಚೇತನ್, ಕಿಶೋರ್, ನಿರ್ದೇಶಕಿ ಕವಿತಾ ಲಂಕೇಶ್, ನಟಿಯರಾದ ಮೇಘನಾ ಗಾಂವ್ಕರ್, ಪೂಜಾ ಗಾಂಧಿ, ನಟ ಶರತ್ ಲೋಹಿತಾಶ್ವ ಸೇರಿದಂತೆ 153ಮಂದಿ ಸಹಿ ಹಾಕಿದ್ದಾರೆ.
ಕೇರಳ ಸರ್ಕಾರ ಈಚೆಗೆ ಬಿಡುಗಡೆ ಮಾಡಿದ ಹೇಮಾ ಸಮಿತಿ ವರದಿಯಿಂದಾಗಿ ಅನೇಕ ನಟ ಹಾಗೂ ನಿರ್ದೇಶಕರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಗಳು ಕೇಳಿಬರುತ್ತಿವೆ.