ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಇಂದು ಜನ್ಮದಿನದ ಸಂಭ್ರಮ. ಈ ಬಾರಿ ಅವರು ಬೇರೆ ನಟರಂತೆ ಮನೆ ಬಳಿ ಬರಬೇಡಿ ಎಂದು ಅಭಿಮಾನಿಗಳಿಗೆ ಹೇಳಿಲ್ಲ. ಹೀಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ವಿಶ್ ಮಾಡುತ್ತಿದ್ದಾರೆ.
ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ಹೀರೋ ಶಿವಣ್ಣ 62 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ಬಾರಿ ಅಭಿಮಾನಿಗಳ ಜೊತೆಗೇ ಶಿವಣ್ಣ ಬರ್ತ್ ಡೇ ಆಚರಿಸಿಕೊಳ್ಳುವುದಾಗಿ ಹೇಳಿದ್ದರು. ಹೀಗಾಗಿ ನಿನ್ನೆ ಮಧ್ಯರಾತ್ರಿಯಿಂದಲೇ ಅವರ ಮನೆ ಮುಂದೆ ಜನ ಸಾಗರವೇ ಹರಿದುಬಂದಿತ್ತು.
ಸಾಕಷ್ಟು ಸಂಖ್ಯೆಯಲ್ಲಿ ಜನ ಬಂದಿದ್ದರಿಂದ ಖುದ್ದಾಗಿ ಶಿವಣ್ಣನೇ ಬಂದು ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕಟ್ ಮಾಡಿ ಧನ್ಯವಾದ ಸಲ್ಲಿಸಿದ್ದಾರೆ. ಅಭಿಮಾನಿಗಳತ್ತ ಕೈ ಬೀಸಿ ಅವರ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಈ ವರ್ಷವಷ್ಟೇ ಶಿವಣ್ಣ ಕ್ಯಾನ್ಸರ್ ಗಾಗಿ ಶಸ್ತ್ರಚಿಕಿತ್ಸೆಗೊಳಗಾಗಿ ಮರುಹುಟ್ಟು ಪಡೆದಿದ್ದರು. ಈ ವೇಳೆ ಸಾಕಷ್ಟು ಅಭಿಮಾನಿಗಳು ಅವರಿಗಾಗಿ ಕಣ್ಣೀರು ಹಾಕಿದ್ದಿದೆ. ಅವರೆಲ್ಲರಿಗೂ ಈ ಮೂಲಕ ಶಿವಣ್ಣ ಧನ್ಯವಾದ ಸಲ್ಲಿಸಿದ್ದಾರೆ.
ಇನ್ನು, ಅಭಿಮಾನಿ ಬಳಗ ಅವರ ಮನೆ ರಸ್ತೆಯ ಎರಡೂ ಬದಿಗಳಲ್ಲಿ ದೊಡ್ಡ ದೊಡ್ಡ ಕಟೌಟ್ ಗಳನ್ನು ಹಾಕುವ ಮೂಲಕ ತಮ್ಮ ಅಭಿಮಾನ ಮೆರೆದಿದ್ದಾರೆ. ಇಂದು ಇಡೀ ದಿನ ಅಭಿಮಾನಿಗಳೊಂದಿಗೆ ಕಳೆಯಲಿದ್ದಾರೆ ಶಿವಣ್ಣ.