ಹೈದರಾಬಾದ್: ಕನ್ನಡ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಮುನ್ನ ಬರೆದಿದ್ದ ಪತ್ರವೊಂದು ಪೊಲೀಸರಿಗೆ ಸಿಕ್ಕಿದ್ದು, ಇದರಲ್ಲಿ ಸೀಕ್ರೆಟ್ ಸಾಲುಗಳನ್ನು ಬರೆಯಲಾಗಿದೆ ಎಂದು ತಿಳಿದುಬಂದಿದೆ.
ಬ್ರಹ್ಮಗಂಟು ಧಾರವಾಹಿ ಖ್ಯಾತಿಯ ಶೋಭಿತಾ ಶಿವಣ್ಣ ಮೊನ್ನೆ ತಡರಾತ್ರಿ ಹೈದರಾಬಾದ್ ನ ತಮ್ಮ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದರು. ಅವರ ಸಾವಿಗೆ ನಿಖರ ಕಾರಣವೇನೆಂದು ಇದುವರೆಗೆ ತಿಳಿದುಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದ್ದು, ಬಳಿಕ ಬೆಂಗಳೂರಿಗೆ ಕರೆ ತರುವ ನಿರೀಕ್ಷೆಯಿದೆ.
ಈ ಸಾವಿನ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ಪೊಲೀಸರಿಗೆ ಶೋಭಿತಾ ಮನೆಯಲ್ಲಿ ಡೆತ್ ನೋಟ್ ಸಿಕ್ಕಿದೆ. ಈ ಡೆತ್ ನೋಟ್ ನಲ್ಲಿ ಎರಡೇ ಎರಡು ಸಾಲು ಬರೆಯಲಾಗಿದ್ದು, ಆ ಸಾಲಿನ ಅರ್ಥವೇನೆಂದು ಈಗ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ.
ನೀನು ಸಾಯಬಹುದು ಅಂದ್ರೆ ಸಾಯಬಹುದು ಎಂದು ಒಂದು ಲೈನ್ ಬರೆಯಲಾಗಿದ್ದು ಇನ್ನೊಂದು ಲೈನ್ ನಲ್ಲಿ ಜೀವನದಲ್ಲಿ ಎಲ್ಲವೂ ಪರ್ಫೆಕ್ಟ್ ಆಗಿದೆ ಎಂದು ಬರೆಯಲಾಗಿದೆ. ಈ ಸಾಲಿನ ಅರ್ಥವೇನು, ಅವರು ಖಿನ್ನತೆಯಿಂದ ಬಳಲುತ್ತಿದ್ದರೇ, ದಂಪತಿ ನಡುವೆ ಭಿನ್ನಾಭಿಪ್ರಾಯಗಳಿತ್ತೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತಮ್ಮ ಸಹೋದರಿಗೆ ಎರಡು ದಿನಗಳ ಹಿಂದಷ್ಟೇ ಕರೆ ಮಾಡಿದ್ದ ಶೋಭಿತಾ ಸಂತೋಷದಿಂದಿರುವುದಾಗಿ ಹೇಳಿದ್ದಲ್ಲದೇ, ಸದ್ಯದಲ್ಲೇ ಊರಿಗೆ ಬರುವುದಾಗಿ ಹೇಳಿದ್ದರಂತೆ. ಶೋಭಿತಾ ಆತ್ಮಹತ್ಯೆಗೆ ಶರಣಾಗುವ ಸಂದರ್ಭದಲ್ಲಿ ಪತಿ ಮನೆಯಲ್ಲಿರಲಿಲ್ಲ ಎಂದು ತಿಳಿದುಬಂದಿದೆ.