ಹೈದರಾಬಾದ್: ಕನ್ನಡ ಮೂಲದ ನಟಿ ಶ್ರೀಲೀಲಾ ವಿರುದ್ಧ ಈಗ ತೆಲುಗು ನಿರ್ಮಾಪಕರೊಬ್ಬರು ನಿರ್ಮಾಪಕರ ಸಂಘ ಮತ್ತು ಮಾ ಅಸೋಸಿಯೇಷನ್ ಗೆ ದೂರು ನೀಡಲು ಮುಂದಾಗಿದ್ದಾರೆ. ಅಷ್ಟಕ್ಕೂ ಅಂಥದ್ದೇನಾಯ್ತು ಇಲ್ಲಿದೆ ನೋಡಿ ವಿವರ.
ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಅಪ್ಪಟ ಕನ್ನಡತಿ ಶ್ರೀಲೀಲಾ ಈಗ ತೆಲುಗಿನಲ್ಲಿ ಮಿಂಚುತ್ತಿದ್ದಾರೆ. ಪರಭಾಷೆಗಳಲ್ಲಿ ಬಹುಬೇಡಿಕೆಯ ನಟಿಯಾಗಿರುವ ಶ್ರೀಲೀಲಾ ಬಾಲಿವುಡ್ ಗೂ ಕಾಲಿಟ್ಟಿದ್ದಾರೆ. ಹೀಗೆ ಕೈ ತುಂಬಾ ಸಿನಿಮಾ ಒಪ್ಪಿಕೊಂಡಿರುವ ಶ್ರೀಲೀಲಾ ವಿರುದ್ಧ ನಿರ್ಮಾಪಕರು ಅಸಮಾಧಾನಗೊಂಡಿದ್ದಾರೆ.
ರವಿ ತೇಜ ನಾಯಕರಾಗಿರುವ ಮಾಸ್ ಜಾತರ ಸಿನಿಮಾದಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಇನ್ನೂ ಕೆಲವು ದಿನ ಬಾಕಿಯಿದೆ. ಆದರೆ ಹಲವು ಸಿನಿಮಾಗಳನ್ನು ಒಪ್ಪಿಕೊಂಡಿರುವ ಶ್ರೀಲೀಲಾಗೆ ಈ ಸಿನಿಮಾಗೆ ಡೇಟ್ಸ್ ಕೊಡಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ನಿರ್ಮಾಪಕ ಭೋಗವರ್ಪು ಅಸಮಾಧಾನಗೊಂಡಿದ್ದು ಶ್ರೀಲೀಲಾ ವಿರುದ್ಧ ನಿರ್ಮಾಪಕರ ಸಂಘ ಮತ್ತು ಮಾ ಅಸೋಸಿಯೇಷನ್ ಗೆ ದೂರು ನೀಡಲು ಮುಂದಾಗಿದ್ದಾರೆ.
ಮಾಸ್ ಜಾತರ ಯಾವತ್ತೋ ಮುಗಿಯಬೇಕಿತ್ತು. ಆದರೆ ಶ್ರೀಲೀಲಾ ಕೈ ಕೊಟ್ಟಿರುವುದರಿಂದ ಚಿತ್ರೀಕರಣ ಮುಂದುವರಿಯುತ್ತಿಲ್ಲ. ಅವರ ಜಾಗಕ್ಕೆ ಬೇರೆಯವರನ್ನು ಕರೆತರಲೂ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಚಿತ್ರತಂಡ ಅಸಮಾಧಾನಗೊಂಡಿದೆ ಎನ್ನಲಾಗಿದೆ.