ಜಾತಿ

vishnu
ಅಂದಿನಿಂದ ಇಂದಿನವರೆಗೂ
ಮುಂದೆ ಎಂದೆಂದಿಗೂ ಇದು ಒಂದು

ಬಿಡಿಸಲಾರದ ಒಗಟು
ಒಂದು ಎರಡು ನಾಲ್ಕು
ನೂರು ಸಾವಿರ ಕೋಟಿ
ಒಂದೊಂದೂ ಬೇರೆ ಬೇರೆ

ಆದರೂ ಎಲ್ಲಾ ಒಂದೇ
ಒಂದೊಂದಕ್ಕೂ ಉತ್ತರ ದಕ್ಷಿಣ ಧ್ರುವಗಳ ಅಂತರ
ಪರಸ್ಪರ ದ್ವೇಷ- ರೋಷ ನಿರಂತರ
ಏಕೆ ಈ ವೈಪರೀತ್ಯ ಈ ಭೇದ

ಎಂದು ಇದಕ್ಕೆ ಕೊನೆ
ಎಂತು ಇದಕ್ಕೆ ಮುಕ್ತಿ?ಬಹುದು ವಿರಕ್ತಿ?
ಇದೊಂದು ಜಾಡ್ಯ
ಔಷಧಿ ಮಾಡಿದಷ್ಟೂ ಉಲ್ಬಣ ಗೊಳ್ಳುವ ಅಂಟುಜಾಡ್ಯ

ಭೀಕರ ಸಾಂಕ್ರಾಮಿಕ ರೋಗ
ಎಲ್ಲೆಲ್ಲು ಹರಡುವುದು ಸರಾಗ
ಇದು ದಿನದಿಂದ ದಿನಕ್ಕೆ ಕಾಲದಿಂದ ಕಾಲಕ್ಕೆ
ಬಣ್ಣ ಬದಲಾಯಿಸುವ ಓತಿ

ರೆಂಬೆಯಿಂದ ರೆಂಬೆಗೆ ಮರದಿಂದ ಮರಕ್ಕೆ
ಮೇಲಿಂದ ಕೆಳಕ್ಕೆ ಕೆಳಗಿಂದ ಮೇಲಕ್ಕೆ
ಹಾರುವ ಕೋತಿ
ಎಂದಿಗೂ ಇದು ತನ್ನ ಹುಟ್ಟುಗುಣ ಬಿಡದು

ಬೀಜ ಒಂದೆ ಹೂವು ಹಣ್ಣು ಹಲವು
ಪರಿಮಳ ದುರ್ವಾಸನೆ ಸಿಹಿ- ಕಹಿ
ಕೆಲವೊಮ್ಮೆ ಪ್ರೀತಿ ಭಯ ಭೀತಿ
ಕೆಲವರ ಬಾಳಿಗೆ ಪೂರಕ ಕ್ರಾಂತಿಕಾರಕ

ಸ್ನೇಹಕ್ಕೆ ಮಾರಕ ಗಲಭೆಗೆ ಪ್ರೇರಕ
ನಾಯಿ ನಾಯನ್ನು ಕಂಡಂತೆ ಕವಿ ಕವಿಯನ್ನು ಕಂಡಂತೆ
ಒಂದಕೆ ಇನ್ನೊಂದು ಎಣ್ಣೆ ಸೀಗೆ
ಕಪ್ಪು ಬಿಳಿ ಬೂದು ಕೆಂಪು

ಎಷ್ಟೊಂದು ವರ್ಣ ವೈವಿಧ್ಯ
ಆದರೂ ಎಲ್ಲರ ಮೈಯ ರಕ್ತದ ಬಣ್ಣ ಒಂದೆ ಕೆಂಪು
ಒಂದು ಎರಡು ನಾಲ್ಕು ನೂರಾರು ಮತ್ತೆ ಸಾವಿರಾರು
ಏಕತ್ವದಿಂದ ಬಹುತ್ವ ಎಲ್ಲ ಕಲಸು ಮೇಲೋಗರ

- ಾ| ಶ್ರೀಕೃಷ್ಣ ಭಟ್ ಅರ್ತಿಕಜೆ

ವೆಬ್ದುನಿಯಾವನ್ನು ಓದಿ