ಕಥೆ: ನಾಗಮುರಿಗೆ

ಜಯಶ್ರೀ ಕಾಸರವಳ್ಳಿ
PTI
ಕಮಲತ್ತೆಯ ಬಹುದಿನದ ಕನಸೊಂದು ಅಂದಿಗೆ ಸಜೀವಗೊಳ್ಳುವುದಿತ್ತು. ಅಂದು ತಾವು ಎಲ್ಲರಗಿಂತ ಬೇಗ ಏಳಬೇಕೆಂದು ಅನೇಕ ದಿನಗಳಿಂದ ಅವರು ಯೋಜಿಸಿದ್ದೇನೋ ಸರಿ. ಆದರೆ, ಮದುವೆಯ ಹಿಂದಿನ ಮೂರು ದಿನಗಳಿಂದ ನಿದ್ದೆ ಸರಿ ಬೀಳದೆ, ಮದುವೆಯ ದಿನ ಬೆಳಗಿನ ಜಾವ ಸಣ್ಣ ಜೋಂಪು ಹತ್ತಿಬಿಟ್ಟು, ಅವರ ಸಾಲು ಹಿಡಿದು ನಿಂತ ಸೊಸೆಗಳು ಪೈಕಿ ಒಬ್ಬಳು. "...ಅತ್ತೆ, ಇದೆಂಥ ಮದುವೆಯ ದಿನ ನಿಮಗೆ ನಿದ್ದೆಯಾ...?" ಎಂದು ಭುಜ ಅಲುಗಿಸಿ ಕೂಗಿದಾಗಲೇ ಅವರಿಗೆ ಎಚ್ಚರ.

"ಅರೇ, ಇಂತಹ ಒಂದು ಸುದಿನಕ್ಕಾಗಿ ಎಷ್ಟು ವರ್ಷದಿಂದ ನಾ ಕಾದವಳು... ಇವತ್ತೆ ಇಂತಹ ಹಾಳು ನಿದ್ದೆಯಾ..?" ಎಂದು ದಂಗುಬಡಿದು ಗಡಬಡಿಸಿ ಎದ್ದಿದ್ದರು.

ಮದುವೆಯ ಹುಡುಗಿಯ ಅಜ್ಜಿಯಾದರೇನು? ಬಚ್ಚಲು ಮನೆ ಎಂಬುವುದು ಖಾಲಿ ಇರಬೇಕಲ್ಲ? ಅದು ಯಾರ ಬೀಗರ ಕಡೆಯವರು, ಯಾರು ಹೆಣ್ಣಿನ ಕಡೆಯರು ಎಂದು ಗೊಂದಲ ಎಬ್ಬಿಸುವ ಹಾಗೆ ತುಂಬಿಕೊಂಡಿದ್ದ ಜನರು... ಆ ಆಗಾಧ ಮನೆಯಲ್ಲಿ ಎಷ್ಟು ಜನರು ಬಂದರೂ, ಹಿಡಿಸುತ್ತಾರೆ ಎಂದು ಅವರು ಒಂದು ಕಾಲದಲ್ಲಿ ಅಂದುಕೊಂಡಿದ್ದ ಅವರ ನಂಬಿಕೆಯನ್ನೇ ಸುಳ್ಳು ಮಾಡುವ ಹಾಗೆ ಕಾಲಿಗೆ, ಕೈಗೆ ಸಿಗುವ ಯಾವುದೋ ಗಂಡುಗಳು.... ಯಾವುದೋ ಹೆಣ್ಣುಗಳು....ಮಕ್ಕಳು ಮರಿಗಳು....ಚಿಳ್ಳೆ ಪಿಳ್ಳೆಗಳು.

ಗುರುತಿರುವವರು "ಅತ್ತೆ ಚೆನ್ನಾಗಿದ್ದೀರಾ?" ಎಂದು ಕೇಳುತ್ತಿದ್ದರು. ಎಪ್ಪತ್ತರ ತಮ್ಮ ಮಾಸಲು ಕಣ್ಣಿಗೆ ಕೈ ಅಡ್ಡ ಹಿಡಿದು ಕಮಲತ್ತೆ, "ಅರೇ, ನೀ ಶಂಕ್ರು ಅಲ್ವಾ? ಎಷ್ಟು ವರ್ಷ ಆತೋ ನಾ ಇವನೆಲ್ಲ ಕಂಡು... ಪಾರೋತಿ ಸತ್ತೇ ಹೋದ್ಲಲ್ಲಾ..." ಎಂದು ಅನುಕಂಪ ಮಿಶ್ರಿತ ಶೋಕ ವ್ಯಕ್ತಪಡಿಸುತ್ತಾ, ಬಚ್ಚಲಲ್ಲಿ ಅನಿವಾರ್ಯವಾಗಿ ಕಾಯಬೇಕಿದ್ದ ಕ್ಯೂಗಳಲ್ಲಿ ತಾವು ಒಬ್ಬರಾಗಿದ್ದರು. ಅವರ ಮನೆತನಕ್ಕೆ ಸದ್ಯಕ್ಕೆ ಹಿರಿಯರಾಗಿ ಉಳಿದಿರುವುದು ಅವರೊಬ್ಬರೆ. ಆ ಹೆಮ್ಮೆ ಕತ್ತಿನ ಪಟ್ಟ ಅವರ ಮಾತಿನಲ್ಲಿ ಆಗಾಗ ವ್ಯಕ್ತವಾಗುತ್ತಿತ್ತು.

ಈ ಎಪ್ಪತ್ತು ವರುಷದಲ್ಲಿ ಅವರ ಕಣ್ಣು ಮುಂದೆ ಸತ್ತ ಪಾರೋತಿ, ಕಮಲಾಕ್ಷಿ, ಸರೋಜಾ, ಶಕುಂತಲಾ ಒಂದು ಪಟ್ಟಿ ಬೆಳೆಸಿಕೊಳ್ಳುತ್ತಾ, ಸೀನ.... ಶಂಬು.... ನಾರಾಯಣ.... ಸುಬ್ಬ... ವೆಂಕಣ್ಣ ಕಳೆದುಕೊಂಡವರ ಜೀವಗಳ ಪಟ್ಟಿ ಹೆಚ್ಚುತ್ತಾ ಹೋದ ಹಾಗೆ ಕಮಲತ್ತೆ ನಿರಾಯಾಸವಾಗಿ ಅವರನ್ನೆಲ್ಲ ಮರೆಯುತ್ತಾ ಬಂದಿದ್ದರು. ಹಾಗಾಗಿ ಎಂದೋ ಸಂಭವಿಸುವ ಒಂದು ಮದುವೆ ಮುಂಜಿಗಳಲ್ಲಿ ಅಪರೂಪಕ್ಕೆ ಕಣ್ಣಿಗೆ ಬೀಳುವ ಅವರೆಲ್ಲರ ಮಕ್ಕಳ ಗುರುತು ಆಕೆಗೆ ಇರುತ್ತಿರಲಿಲ್ಲ.

ಯಾರಾದರೂ "ನಾ ಪಾರೋತಿಯ ಮಗ ಅಂದರೆ, ಯಾವ ಪಾರೋತಿ ಮಗನೋ? ತೀರ್ಥಹಳ್ಳಿದೋ, ಕನ್ನಡ ಜಿಲ್ಲೆದೋ?" ಎಂದು ವಿಚಾರಿಸಿಕೊಳ್ಳುತ್ತಿದ್ದಳು. ಅವನು ತಾನು ಯಾವ ಪಾರೋತಿ ಮಗನು ಎಂದು ಹೇಳಿ ಮುಗಿಸಿ ಅರ್ಧಗಂಟೆ ಕಳೆಯುವುದರೊಳಗೆ ಅವರು ಮರೆತು ಬಿಡುತ್ತಿದ್ದರು.

ಆದರೆ, ಇಂದು ಹಾಗಲ್ಲವಲ್ಲಾ.

ತಾವೇ ಎತ್ತಿ ಆಡಿಸಿದ ಮೊಮ್ಮಗಳು ಮದುವೆಯಾಗುತ್ತಿದ್ದಾಳೆ. ತಮ್ಮ ಸ್ವಂತ ಮಕ್ಕಳನ್ನೂ ಅಷ್ಟು ಪ್ರೀತಿಯಿಂದ ಆಡಿಸಿದ್ದರೋ, ಇಲ್ಲವೋ ಅಷ್ಟು ಮುದ್ದಿನ ಮೊಮ್ಮಗಳು. ತಾವು ಸಾಯುವುದರೊಳಗೆ ಅವಳ ಮದುವೆಯೊಂದನ್ನು ಕಂಡು ಸಾಯಬೇಕೆಂದು ಬಯಸುವ ಅನೇಕ ಮುದುಕಿಯರಂತೆ ತಮ್ಮ ಸಾವನ್ನು ಮುಂದೂಡುತ್ತಾ ಬಂದವರವರು.

"... ಅತ್ತೆ ಕೆಳಗೆ ಬಚ್ಚಲು ಖಾಲಿ ಇದೆ. ಸ್ನಾನ ಮಾಡುತ್ತೀರಾ? "

ಅವರು ತಿರುಗಿ ನೋಡಿದರು. ಅವರ ಶಾಂತ ಸ್ವಭಾವದ ಎರಡನೇಯ ಸೊಸೆಯಾಗಲೇ ಸ್ನಾನ ಮಾಡಿ, ಅಲಂಕಾರಗೊಂಡು ನಿಂತಿದ್ದಾಳೆ.


"ನಿನ್ನ ಸ್ನಾನ ಆಯ್ತೇನೇ? ಯಾವಾಗ ಎದ್ದೇ ?"

"ಎದ್ದು ತುಂಬಾ ಹೊತ್ತೇ ಆಯಿತು. ನಿಮ್ಮದ್ಯಾಕೆ ತಡ ಆಯಿತು. ಕೆಳಗಿನ ಬಚ್ಚಲು ಖಾಲಿ ಇದೆ"

"ಇರಲೀ ಕಣೇ, ಮೆಟ್ಟಿಲು ಹತ್ತಿ ಇಳಿಯುವುದಕ್ಕೇ ನಂಗಾಗುವುದಿಲ್ಲ. ಇಲ್ಲೇ ಕಾಯ್ತೇನೆ"

ಅಷ್ಟರಲ್ಲೇ ಬಚ್ಚಲು ಬಾಗಿಲು ತೆರೆದಿದ್ದು ಸ್ನಾನಕ್ಕೆ ಹೋದರು.

ಹಳೇಗಾಲದ ಭರ್ಜರಿ ಮನೆ ಅದು. ಎಷ್ಟು ಕಂಬಗಳಿದ್ದವೋ, ಎಷ್ಟು ಮೂಲೆಗಳಿದ್ದವೋ, ಎಷ್ಟು ತೊಲೆಗಳಿದ್ದವೋ, ಎಲ್ಲಕ್ಕೂ ಬಣ್ಣ ಬಣ್ಣದ ಕಾಗದಗಳನ್ನು, ಸುನಾರಿ ಕಾಗದಗಳನ್ನು ಸುತ್ತಿ, ಇಡೀ, ಮನೆಯೇ ಅಂದಿನ ಮದುವೆ ವೀಕ್ಷಿಸಲು ಸಿದ್ಧಗೊಂಡಿತ್ತು.

ಮನೆಯ ಮತ್ತೊಂದು ಭಾಗವಾದ ಒಳಕೋಣೆಯಲ್ಲಿ ಮದುಮಗಳ ಶೃಂಗಾರ ಆಗುತ್ತಿತ್ತು. ಹೆಣ್ಣು ಮಕ್ಕಳು ಉತ್ಸಾಹದಿಂದ ಹುಡುಗಿಯನ್ನು ಶೃಂಗರಿಸುತ್ತಿದ್ದರೆ, ಉಳಿದವರೆಲ್ಲ ಹುಡುಗಿಯ ಇಮ್ಮಡಿಸುವ ಅಂದ ಚಂದದ ವೀಕ್ಷಣೆಗಾಗಿ ಅಲ್ಲಿ ನೆರೆದಿದ್ದರು.

ಕಮಲತ್ತೆಯ ಹಿರೇಮಗನ ಮಗಳಾದ ಆಕೆ ಮೊದಲೇ ಬಳಕುವ ಲಾವಣ್ಯವತಿ. ಇನ್ನು ಹಲವರ ಚಳಕದ ಅದ್ಭುತ ಅಲಂಕಾರಗಳಿಂದ ಆ ಸೌಂದರ್ಯ ಅತಿಶಯವಾಗಿ ಮೆರುಗುವುದಲ್ಲದೆ ಕುಗ್ಗುತ್ತದೆಯೇ? ತೀರ್ಥಹಳ್ಳಿಯ ಸುತ್ತಮುತ್ತಲಿನ ಕೆಲವೇ ಕೆಲವು ಶ್ರೀಮಂತ ಮನೆತನಗಳಂತಹ ಒಂದು ಮನೆಯಲ್ಲಿ, ಕಮಲತ್ತೆಯ ಹಿರೇಮಗ ಸೂರಿಯ ಅತ್ಯಂತ ಮುದ್ದಿನವಳೂ, ಮನೆಯ ಉಳಿದವರೆಲ್ಲರ ಅಚ್ಚುಮೆಚ್ಚಿನವಳೂ ಆಗಿ ಬೆಳೆದು ಬಂದ ಹುಡುಗಿಯಾಕೆ. ಬೇರೆ ಯಾವುದೇ ವಿಷಯದಲ್ಲಿ ಎಷ್ಟು ಬೊಡ್ಡಾದರೇನು, ಥಳಿಥಳಿಸುವ ಸೌಂದರ್ಯದ ವಿಷಯದಲ್ಲಿ ಆಕೆ ಅಪ್ಪಟ ಚಿನ್ನವೇ. ಹೆಣ್ಣೆಂದರೆ ಬರೀ ಸೌಂದರ್ಯ ಮಾತ್ರ ಎಂಬ ನಂಬಿಕೆಗೆ ತಕ್ಕಂತೆ, ಕಷ್ಟಕ್ಕೇ ಲಾಯಕ್ಕಾಗಿ ಹುಟ್ಟಿ ಬಂದ ಹುಡುಗಿ ಆಕೆ. ಹಾಗಾಗಿ ತನ್ನ ರೂಪದ ಜೊತೆಗೆ ಏನೇನು ಬೇಕೋ ಅವೆಲ್ಲವೂ ಆಕೆಗೆ ಸುಲಭವಾಗಿ ಲಭ್ಯವಾಗಿತ್ತು.

ಅವಳ ಸುತ್ತಾ ಅವಳಿಂದು ತೊಡಬೇಕಾಗಿದ್ದ ರಾಶಿ ರಾಶಿ ಆಭರಣಗಳ ಪೆಟ್ಟಿಗೆಗಳೇ ಬಾಯಿ ತೆರೆದು ನಿಂತಿದ್ದವು.

ಅದನ್ನು ಆಕೆಯ ಕುತ್ತಿಗೆಯಿಂದ ಹೊಕ್ಕಳವರೆಗೆ ಜೋಡಿಸಿ ತೊಡಿಸುತ್ತಿದ್ದವಳು- ಆ ಮನೆಯ ಮೂರನೇ ಸೊಸೆ. ತಾವು ಹುಟ್ಟಿಬಂದ ಮನೆಯಲ್ಲಿ ತಪ್ಪಿಯೂ ಕೂಡ ಅಂತಹದ್ದನ್ನೆಲ್ಲಾ ಕಾಣಲು ಸಾಧ್ಯವಿರದ ಆಕೆಗೆ ಆಗ ಇಂತಹ ಕಾರ್ಯಗಳಲ್ಲೆಲ್ಲಾ ಮಹಾ ಆಸಕ್ತಿ ಬಿಡಿ. "ಎಷ್ಟು ಚೆನ್ನಾಗಿದೆಯೇ? ಎಷ್ಟು ಚೆನ್ನಾಗಿ ಕಾಣುತ್ತಿದೆಯೇ? ಈ ಚಿನ್ನಗಳೆಲ್ಲಾ ನಿನಗೇ ಹೇಳಿಸಿಟ್ಟ ಹಾಗಿದೆಯಲ್ಲ!" ಎಂದು ಆಗಾಗ ಮಹಾಮುಗ್ಧರಂತೆ ಉದ್ಗರಿಸುತ್ತಾ, ಆ ಆಭರಣಗಳನ್ನೆಲ್ಲಾ ಒಮ್ಮೆ ಹತ್ತಿರದಿಂದ ಮತ್ತೊಮ್ಮೆ ದೂರದಿಂದ ಹಿಡಿದು, ಅಳೆದು, ಬೆಳಕಿಗೆ ಹೊಳೆವ ಅದರ ಕೆತ್ತನೆಗಳಿಂದ ನಿಬ್ಬೆರಗಾಗಿ ಆಕೆಯ ಕುತ್ತಿಗೆಗೆ ಒಂದೊಂದಾಗಿ ಇಳಿಬಿಡುತ್ತಿದ್ದರು.

ಶ್ರೀಮಂತರ ಮದುವೆಗಳಲ್ಲಿ ಮದುವೆಯ ಸೌಂದರ್ಯ ಎಂದು ಯಾವುದನ್ನ ಅಂಥವರು ಗುರುತಿಸಿಕೊಳ್ಳಲು ಬಯಸುತ್ತಾರೋ ಅವು ಇರುವುದೇ ಹುಡುಗಿ ಹಾಕಿಕೊಳ್ಳುವ ಚಿನ್ನ, ತೊಡುವ ಸೀರೆ, ಅವರು ಬಡಿಸುವ ಊಟಗಳಲ್ಲಿ ಅಷ್ಟೇ ತಾನೇ. ಸಕಲರೀತಿಯಿಂದಲೂ ಅಂದಿನ ಮದುವೆ ನಿರಾಯಾಸವಾಗಿ ಅದೇ ಹಾದಿಯತ್ತ ಸಾಗುತ್ತಿತ್ತು.

ಮದುವೆಗೆ ಬಂದ ನೆಂಟರಿಷ್ಟರೂ ಅಷ್ಟೆ. ಅವರ ದೃಷ್ಟಿಯಲ್ಲಿ ಮಹಾ ಘನತೆ ಗೌರವ ಇರುವಂತಹವರು ಮಾತ್ರ. ತಮ್ಮ ಅಂತಸ್ತಿಗೆ ಸರಿಯಿರದೇ, ಘನತೆ ಗೌರವಕ್ಕೆ ಪಾತ್ರರಲ್ಲ ಎನ್ನಿಸಿದರೆ, ಒಡಹುಟ್ಟಿದವರನ್ನೂ ಕೂಡ ಕಡೆಗಣಿಸುವುದರಲ್ಲಿ ಕಮಲತ್ತೆಯ ಮಕ್ಕಳೇನೂ ಹಿಂದುಳಿದಿರಲಿಲ್ಲ ಬಿಡಿ; ಹಾಗಾಗಿ ಕಮಲತ್ತೆಯ ಒಬ್ಬ ಮಗಳು ಆ ಮದುವೆಯಲ್ಲಿ ನಾಪತ್ತೆ. ಮದರಾಸಿನಲ್ಲಿ ತನ್ನ ಪಾಡಿಗೆ ತಾನು ಯಾರನ್ನೋ ಕಟ್ಟಿಕೊಂಡು, ದಿನಬೆಳಗಾದರೆ, ದುಡ್ಡಿಗೆ ಏಗಲಾಡುವಂತಹ ಸಾಧಾರಣ ಜೀವನ ನಡೆಸುತ್ತಿದ್ದ ಆಕೆ ತನ್ನಂತರಂಗದಲ್ಲಿ ಮನೆಯವರ ಎಷ್ಟೋ ಗುಟ್ಟುಗಳನ್ನು ನುಂಗಿಕೊಂಡು ಸರ್ವರೀತಿಯಿಂದಲೂ ತನ್ನನ್ನು ಹುಟ್ಟಿಸಿದ ಮನೆಯ ಮರ್ಯಾದೆ ಕಾಪಾಡಿದವಳು.

ಆದ್ದರಿಂದಲೇ ಅವಳಿಂದು ಮನೆಯಿಂದ ಹೊರಗೆ. ಬಿಸಿಲಿನಲ್ಲಿ ತರಕಾರಿಗಾಗಿ ಬೀದಿ ಅಲೆಯುತ್ತಾ, ಬೆವರು ಸುರಿಸುತ್ತಿರುವ ಆ ಮಗಳಿಗೆ ಇಂದಿನ ಈ ಮದುವೆಯ ವಿಷಯವೇ ತಿಳಿದಿರಲಿಲ್ಲ. ಅದಕ್ಕಾಗಿ ಅವಳು ಕಳೆದುಕೊಂಡಿದ್ದಾಗಲೀ, ಅವಳಿಗೆ ತಿಳಿಸದೇ ಗುಟ್ಟು ಮಾಡಿ ಮದುವೆ ಮಾಡಿದ ಇವರು ಪಡೆದುಕೊಂಡಿದ್ದಾಗಲೀ ಅಷ್ಟರಲ್ಲೇ ಇತ್ತು. ಹೆಚ್ಚೆಂದರೆ ಗುಂಪಿನಲ್ಲಿ ಗೋವಿಂದ ಆಗಿ, ಎಲ್ಲೋ ಮೂಲೆಯಲ್ಲಿ ಕುಳಿತು ತನ್ನ ಬಾಳೆಲೆಗೆ ಬಂದು ಬಿದ್ದ ಚಿರೋಟಿಯನ್ನೋ ಫೇಣಿಯನ್ನೋ ತಿಂದುಕೊಂಡು ಹೋಗುತ್ತಿದ್ದಳು ಅಷ್ಟೇ. ಪ್ರಾಯಶಃ ಆ ಒಂದು ಚಿರೋಟಿಯಲ್ಲೋ, ಫೇಣಿಯಲ್ಲೋ ಅವರ ಮಾನ ಉಳಿಯುವುದಾದರೆ ಉಳಿಯಲಿ, ಪಾಪ. ಶ್ರೀಮಂತ ಮನೆತನವದರಿಗೆ ಅಷ್ಟೂ ಮರ್ಯಾದೆ ಬೇಡವೇ?

...ಇತ್ತ ಕಮಲತ್ತೆ ಸ್ನಾ ಮಾಡಿ ಬಂದರು. ಅವರಿಗೆ ಈ ಎಪ್ಪತ್ತು ವರುಷ ಬದುಕಿದ್ದ ತಮ್ಮ ಮನೆಯಲ್ಲೇ ಹಾದಿ ತಪ್ಪಿದ ಹಾಗೆ ಆಗುತ್ತಿತ್ತು. ಅವರ ಕಡೆ ಮಗಳ ಮದುವೆ ಆಗಿ ಆಗಲೇ ಹನ್ನೆರಡು ವರುಷಗಳೇ ಕಳೆದು, ಆಗ ಓಡಿ ಆಡಲು ಇಷ್ಟು ನಿತ್ರಾಣ ಎನ್ನಿಸದೇ ಸ್ವಲ್ಪವಾದರೂ ಶಕ್ತಿ ಇತ್ತು. ಆದರೆ, ಅವರ ಬಹುದಿನದ ಆಸೆಯ ಈ ಮೊಮ್ಮಗಳ ಮದುವೆ ಹತ್ತಿರವಾಗುತ್ತಿದ್ದಂತೆ ಅವರು ಒಳಗೊಳಗೇ ಕುಸಿಯುತ್ತಿದ್ದರು. ಹೊರಗೆ ಉತ್ಸಾಹದಿಂದಲೇ ಓಡಿಯಾಡುತ್ತಿದ್ದರೂ ಮನಸ್ಸು ರಾಡಿ ಎದ್ದು ಹೋಗಿತ್ತು. ಒಂದು ರೀತಿಯ ಅರೆಮರಳು... ಜ್ಞಾಪಕ.... ಗೊಂದಲಗಳ ನಡುವೆ ಕಸಿವಿಸಿಗೊಳ್ಳುತ್ತಾ ಅಸಂಖ್ಯ ಜನಗಳು ದಿಕ್ಕುಗೆಟ್ಟವರಂತೆ ಹಾದಿ ಹುಡುಕುತ್ತಿದ್ದರು....

ಎಂದಿನಿಂದಲೂ ತಿಳಿದಿದ್ದ ಆ ಮನೆಯನ್ನು, ಹಳೇಮನೆ ಎಂದು ಮಗ ತನ್ನ ಮಗಳ ಮದುವೆಗಾಗಿ ಕೆಡವಿ ಹೊಸ ರೂಪ ಕೊಟ್ಟಿದ್ದರಿಂದ ಹಾಗೆ ಆಗುತ್ತಿರಬಹುದೆಂದುಕೊಂಡರು. ಕೋಣೆಗೆ ಹೋಗಬೇಕಾದವರು ಹೆಬ್ಬಾಗಿಲಿಗೆ ಬರುತ್ತಿದ್ದರು. ಹೆಬ್ಬಾಗಿಲು ದಾಟಿ, ಅಡುಗೆ ಮನೆಗೆ ನುಗ್ಗುತ್ತಿದ್ದರು. ಅರೇ! ಇದೆಲ್ಲಿ ಬಂದೆ! ಎಂದು ತಿರುಗಿ ಹೋದವರು ಪಡಸಾಲೆಗೆ ಹೋಗುತ್ತಿದ್ದರು. ಕಡೆಗೆ ತಾವು ಬದುಕಿಬಂದ ತಮ್ಮ ಮನೆಯ ಹಾದಿಯೇ ತಿಳಿಯದಂತೆ, ಕಣ್ಣಿಗೆ ಕಂಡ ಮದುವೆಗೆ ಬಂದ ನೆಂಟರಲ್ಲಿ ಒಬ್ಬಳಿಗೆ "ಏ ಇವಳೇ, ನನ್ನೂಂಚೂರು ಒಳಗಿನ ಆ ಕನ್ನಡಿ ಕೋಣೆಗೆ ಕರೆದುಕೊಂಡು ಹೋಗುತ್ತೀಯಾ....?" ಎಂದು ಕೇಳಿದ್ದರು.

ಏಕೆಂದರೆ ಮದುಮಗಳನ್ನು ಸಿದ್ಧಗೊಳಿಸುತ್ತಿದ್ದದ್ದು ಅವರ ಎಪ್ಪತ್ತು ವರುಷದ ಜೀವನದಲ್ಲಿ ತೀರಾ ಚಿರಪರಿಚಿತವಾಗಿದ್ದ ಅದೇ ಕೋಣೆಯಲ್ಲಿ.

ಕೋಣೆಗೆ ಬರುತ್ತಿದ್ದ ಹಾಗೇ ಮತ್ತೆ ಕಮಲತ್ತೆಗೆ ಕಂಗೆಡುವಂತಾಗಿತ್ತು. ಅಲ್ಲಿ ಕಂಡ ಯಾರಿಗೋ, "ಮದುಮಗಳ ಸ್ನಾನ ಆಯಿತಾ?" ಕೇಳಿದರು.

"...ಎಂತಾ ಅತ್ತೇ, ಅವಳ ಸ್ನಾನ ಯಾವಾಗಲೋ ಆಯಿತು. ನೋಡಿ, ಹೇಗೆ ಅಲಂಕಾರಗೊಂಡು ಚಿನ್ನದ ಪುತ್ಥಳಿಯ ಹಾಗೆ ಕಾಣುತ್ತಿದ್ದಾಳೆ ನಿಮ್ಮ ಮೊಮ್ಮಗಳು...."ಎಂದು ಗಟ್ಟಿಯಾಗಿ ಹೇಳಿದ್ದಷ್ಟೇ ಕೇಳಿಸಿತು.

ಎಪ್ಪತ್ತು ವರುಷವಾದರೂ ಕಮಲತ್ತೆಗೆ ಕಿವಿ ಕಿವುಡಾಗಿರಲಿಲ್ಲ. ಆದರೆ, ಕಣ್ಣು ಯಾಕೋ ಇದ್ದಕ್ಕಿದ್ದಂತೆ ಮಸುಕು ಮಸುಕಾಗಿ, ವಿಶೇಷವಾಗಿ ಅಂದು ಯಾವುದೂ ಸ್ಪಷ್ಟವಾಗಿ ಕಾಣಿಸದಂತೆ ಅವರಿಗೆ ಅನ್ನಿಸುತ್ತಿತ್ತು.

"...ಎಲ್ಲಿದ್ದಾಳೆಯೇ ಅವಳು? ಅಷ್ಟು ಜನ ಮುತ್ತಾಕ್ಕೊಂಡ್ರೆ ನಂಗೆ ಹೇಂಗೆ ಕಾಣುತ್ತೇಳು....?"

"ಅಯ್ಯೋ ಅತ್ತೇ! ಇಂತಾ ಮೊಮ್ಮಗಳೇ ನಿಮ್ಮ ಕಣ್ಣಿಗೆ ಬೀಳಲಿಲ್ಲ ಅಂದ್ರೆ ಮತ್ತೆಂತಾ ಕಾಣುಸುತ್ತೇ..." ಅವರ ಸೊಸೆ ಅನುಕಂಪದಿಂದ ನುಡಿದಾಗ, ನೆರೆದವರ ಮುಖಗಳಲ್ಲಿ ನಗೆ ಆಡಿದ ಸದ್ದು ಕಿವಿಗೆ ಬಿದ್ದು, ಕಮಲತ್ತೆಗೆ ಎಲ್ಲೋ ಚುರ್ರ್ ಚುರ್ರ್ ಅಂದ ಹಾಗೆ ಆಯಿತು.

"...ಸರಿಬಿಡು....! ನಾ ಆಮೇಲೆ ಅವಳನ್ನ ನೋಡ್ತೀನಿ...." ಎಂದು ತಾವೂ ಸೀರೆಯುಟ್ಟು, ಸಿದ್ಧರಾಗಲು ತಿರುಗಿದವರು. ಅದಾಗಷ್ಟೇ ನೆನಪಿಗೆ ಬಂದವರಂತೆ, ಐದು ವರುಷದಿಂದ ಬ್ಯಾಂಕಿನಲ್ಲಿ ಗುಪ್ತನಿಧಿಯಂತೆ ಕಾಪಾಡಿ, ಕಡೆಗೂ ತಮ್ಮ ಅಭಿಲಾಷೆಯಂತೆ ಮೊಮ್ಮಗಳಿಗೆ ತಾವು ಮಾಡಿಸಿದ ತಮ್ಮ ಅಮೂಲ್ಯ ಇಪ್ಪತ್ತು ಸಾವಿರದ ನಾಗಮುರಿಗೆ ಪಕ್ಕನೇ ಜ್ಞಾಪಕಕ್ಕೆ ಬಂದು,

"...ಅಲ್ಲಾ ಹೆಣ್ಣೇ! ನಾ ಕೊಟ್ಟ ನಾಗಮುರಿಗೇ ಹಾಕ್ಕೊಂಡೆ ತಾನೇ?" ಎಂದು ಕೇಳಿದರು.

"ಇಲ್ಲಾ ದೊಡ್ಡಮ್ಮಾ! ಅದು ತುಂಬಾ ಭಾರ ನಾ ಕಡೀಗ್ ಹಾಕ್ಕೋಳತೀನಿ...." ಈಗ ಮೊಮ್ಮಗಳು ಉತ್ತರಿಸಿದಳು.

ಕಮಲತ್ತೆ ಸ್ವಲ್ಪ ಪೆಚ್ಚಾದರೂ, "ಹಾಂ! ಹಾಂ! ಕಡೀಗಾದರೂ ಮತ್ತೆ ಹಾಕ್ಕೋ! ಇಪ್ಪತ್ತು ಸಾವಿರ ಕೊಟ್ಟಿದೀನಿ ಅದಕ್ಕೇ..." ಎಂದು ನೆಗಾಡಿದರು; ಅಲ್ಲಿ ನೆರೆದ ಹೆಂಗಸರ ಪಾಳ್ಯಕ್ಕೆ ತಾವು ಮೊಮ್ಮಗಳ ಮದುವೆಗಾಗಿ ಇಪ್ಪತ್ತು ಸಾವಿರ ಖರ್ಚು ಮಾಡಿದ್ದನ್ನು ತಿಳಿಸುವ ಸಲುವಾಗಿಯೇ ಆಡಿದ್ದಂತೆ ಆಡಿ ತೋರಿಸಿ ಒಳಕೋಣೆ ಸೇರಿಕೊಂಡಿದ್ದರು.

ಬೀರುವಿನಲ್ಲಿ ತಾವು ತಾವು ಮೊಮ್ಮಗಳ ಮದುವೆಗಾಗಿ ಇಟ್ಟುಕೊಂಡಿದ್ದ ಸೀರೆ ಕಣ್ಣಿಗೆ ಬಿತ್ತು. ಆ ಸೀರೆ ಉಡುವುದೇ? ಒಮ್ಮೆ ಯೋಚಿಸಿದರು. ಸ್ವಲ್ಪ ಭಾರ ಆಗಿದೆ ಅದು. ಈ ವಯಸ್ಸಿನಲ್ಲಿ ಆ ಸೀರೆಯೇ? ಮರುಕ್ಷಣ. ಇದೊಂದು ಮೊಮ್ಮಗಳ ಮದುವೆ... ಮತ್ತೆ ಮೊಮ್ಮಕ್ಕಳ ಮದುವೆಯ ಹೊತ್ತಿಗೆ ನಾನೇ ಇರುತ್ತೇನೋ, ಇಲ್ಲವೋ, ಉಟ್ಟು ಬಿಡುವುದು... ಎಂದು ತೆಗೆದು ಅದನ್ನೇ ಉಟ್ಟರು. ಎಪ್ಪತ್ತಾದರೂ ಲಕ್ಷಣವಾಗೇ ಇದ್ದ ಕಮಲತ್ತೆಗೆ ಹಸಿರುಬಣ್ಣದ, ನವಿಲು ಬಾರ್ಡರ್‌ನ ಆ ಸೀರೆ ಲಕ್ಷಣವಾಗೇ ಕಾಣುಸುತ್ತಿತ್ತು. ಅವರದ್ದೇನಿದ್ದರೂ ಹತ್ತೇ ನಿಮಿಷಗಳಲ್ಲಿ ಮುಗಿದುಹೋಗುವ ಅಲಂಕಾರ.

ಕೋಣೆ ಬಾಗಿಲು ತೆರೆದು ಹೊರಬಂದರೆ, ಹುಡುಗಿಯ ಸುತ್ತ ಮತ್ತೆ ಏನೋ ಗೌಜು.... ಅವರು ಕುತೂಹಲದಿಂದ ನೆರೆದವರಿಗೆ ಸ್ವಲ್ಪ ದಾರಿ ಬಿಡಿ, ಸ್ವಲ್ಪ ದಾರಿ ಬಿಡಿ ಎನ್ನುತ್ತಾ ಮೊಮ್ಮಗಳ ಹತ್ತಿರ ಹೋದರು.

ಅವರ ಮೊಮ್ಮಗಳ ತಾಯಿ ಅಂದರೆ ಅವರ ಹಿರೇಸೊಸೆಯ ಅಕ್ಕ ಮಂಗಳೂರಿನ ಸೂಕ್ಷ್ಮ ಕೆತ್ತನೆಯ ಚಿನ್ನದ ಲೋಲಾಕನ್ನು ಹುಡುಗಿಗೆ ಉಡುಗೊರೆಯಾಗಿ ತಂದಿದ್ದಳು. ಉಳಿದವರೆಲ್ಲಾ ಆ ಕೆತ್ತನೆಯ ಅದ್ಭುತಕ್ಕೆ, ಅದರ ಶೈಲಿಗೆ, ಮೆಚ್ಚಿಗೆ ಸೂಚಿಸಿ ತಲೆದೂಗುತ್ತಾ, ನಗುತ್ತಾ ಮಾತನಾಡುತ್ತಿದ್ದರು.

ಕೈಯಲ್ಲಿ ಹಿಡಿದು ಅಳೆದವರು ಒಬ್ಬರು. ತಮ್ಮ ಕಿವಿಗೆ ಸುಮ್ಮನೆ ಹೊರಗಿನಿಂದಲೇ ಜೋತುಬಿಟ್ಟು ಹೇಗಿದೆ ಎಂದು ಉಳಿದವರನ್ನು ವಿಚಾರಿಸಿದರು ಕೆಲವರು.

"ಹುಡುಗೀನ ಗೌರೀಪೂಜೆಗೆ ಕರೆತನ್ನಿ. ಆಮೇಲೆ ಮುಹೂರ್ತಕ್ಕೆ ಹೊತ್ತಾಗುತ್ತೆ..." ಯಾರೋ ಕೂಗಿದರು.

ಕಮಲತ್ತೆ ಕಣ್ಣಿಗೆ ಕೈ ಅಡ್ಡ ಹಿಡಿದು, ತಮ್ಮ ಅತೀ ಸಮೀಪ ನಿಂತವರನ್ನು ನೋಡಿ, ಅರೇ! ಇದು ಚಿನ್ನು, ಇವನ್ಯಾವಾಗ ಬಂದ... ಅದು ಯಶೋದೆ, ಅವಳು ಯಾವಾಗ ಬಂದಳು... ಮದುವೆಗೆ ಎಲ್ಲಿಂದಲೋ ಯಾರ್ಯಾರೋ ಬಂದಿದ್ದಾರಲ್ಲ... ಎಂದು ಅರೆಗತ್ತಲ ಆ ಕೋಣೆಯಲ್ಲಿ ನೆರೆದ ಮುಖಗಳನ್ನೇ ಮಿಕಿಮಿಕಿ ನೋಡುತ್ತಾ ತಮ್ಮ ನೆನಪಿನಲ್ಲಿ ಅವರ್ಯಾರು ಆಗಿರಬಹುದೆಂದು ಹುಡುಕುತ್ತಿದ್ದರು....

ಓಯೇ, ಮೂಲೇಲಿ ನಿಂತಿದ್ದು ವಸುಧಾ... ಬೆಂಗಳೂರಿನ ಅನ್ನಪೂರ್ಣ ಅಲ್ವಾ... ಇದು... ಇದು.... ಬೆಂಗಳೂರಿಗೆ ನಾ ಹೋದಾಗ ಊಟಕ್ಕೆ ಕರೆದಿತ್ತಲ್ಲ. ಶಂಕರೂ ಮಾವನ ಮಾಣಿಯ ಮಗ ಅಲ್ವಾ....? ಅಯ್ಯೋ ಅದು, ಭಾವಯ್ಯನವರ ಮಗಳು ಸುಭದ್ರಾ, ಬಾಂಬೆಯಿಂದ ಬಂದಿದೆಯಲ್ಲಾ.... ಎಷ್ಟು ವರುಷ ಆಯಿತು. ಇವರನ್ನೆಲ್ಲಾ ನೋಡಿ... ಹನ್ನೆರಡೋ... ಹದಿನೈದೋ....! ಅವುಗಳ ಮದುವೇಲಿ ನೋಡಿದ್ದೋ ಯೆಂತೋ.....! ಸೂರಿ ಪರವಾಗಿಲ್ಲವೇ! ಯಾವ ಸಂಬಂಧವನ್ನೂ ಬಿಟ್ಟಿಲ್ಲ...! ಎಷ್ಟೆಷ್ಟು ದೂರದಲ್ಲಿದ್ದವರಿಗೆಲ್ಲಾ ಹೇಳಿಕೆ ಮಾಡಿದ್ದಾನೆ... ಸಂಬಂಧ ಬಿಟ್ಟಿಲ್ಲ.... ಎಲ್ಲರನ್ನೂ ಕರೆದಿದ್ದಾನಲ್ಲ... ಅವರು ಮನಸ್ಸಿನಲ್ಲೇ ಕೊಂಡಾಡಿದರು- ತಮ್ಮ ಹಿರೇಮಗ ಸಂಬಂಧಗಳನ್ನೆಲ್ಲಾ ಪತ್ತೆ ಹಚ್ಚಿ ಎಲ್ಲೆಂಲ್ಲಿಂದಲೋ ಯಾರ್ಯಾರನ್ನೋ ಕರೆದು ತಂದಿದ್ದನ್ನ ನೋಡಿ... ನಗುತ್ತಾ ಒಬ್ಬೊಬ್ಬರ ಹತ್ತಿರವೂ ಹೋಗಿ ಮಾತನಾಡಿದರು.

"... ಸೌಖ್ಯನಾ ಅತ್ತೆ.....? ಹುಷಾರಿದೀರಾ ಅತ್ತೆ...! ಯಾಕೆ ಹೀಗೆ ಬತ್ತಿದೀರಿ ಅತ್ತೆ?... ನಿಮ್ಮನ್ನು ನೋಡಿ ಎಷ್ಟು ವರುಷವಾಯಿತತ್ತೆ.... ನೀವಂತೂ ನಾನಿರುವ ಕಡೆ ಬರುವುದೇ ಇಲ್ಲ. ಹೀಗೆ ಆಗೊಂದು ಈಗೊಂದು ಮದುವೇಲಿ ನೋಡುವುದಾಯಿತು. ನಿಮ್ಮನ್ನ..."

ಒಬ್ಬರೇ, ಇಬ್ಬರೇ.... ಎಲ್ಲರೂ ನಿಂತು, ನಿಂತು ಅತ್ತೆಯನ್ನು ಮಾತನಾಡಿಸುವವರೇ, ಎಲ್ಲರಿಗೂ ಮೊದಲಿನಿಂದಲೂ ಅವರು ಕಮಲತ್ತೆಯೇ, ಎಷ್ಟೋ ವರುಷದ ನಂತರ ತಮ್ಮ ಭಾವಂದಿರ, ಅಕ್ಕಂದಿರ, ಅಣ್ಣಂದಿರ ಮಕ್ಕಳನ್ನೆಲ್ಲಾ ನೋಡುತ್ತಿದ್ದೀನಲ್ಲಾ ಅಂತೆನ್ನಿಸಿ, ಸಂತೋಷದಿಂದ ಅವರ ಹೃದಯ ತುಂಬಿ, ಗಂಟಲು ಒತ್ತಿ ಬರುತ್ತಿತ್ತು.

"ದುಃಖವಾ ಅತ್ತೆ....?" ಯಾರೋ ತಪ್ಪಾಗಿ ಊಹಿಸಿ ಕೇಳಿಬಿಟ್ಟಿದ್ದರು.

"ಛೇ! ದುಃಖವಾ? ಯಾತಕ್ಕೆ....?" ಕಮಲತ್ತೆ ದಂಗಾಗಿ ಕೇಳಿದರು.

"ಅದೇ ಅತ್ತೆ? ನಿಮ್ಮ ನಾಲ್ಕನೇ ಮಗ ಹೋದ ವರುಷ ಸತ್ತನಂತಲ್ಲ. ನಮಗೆ ಪೇಪರಿನಲ್ಲಿ ನೋಡಿಯೇ ಗೊತ್ತಾದದ್ದು, ಕೊಲೆಯಾಯಿತು ಅಂಬುವುದಲ್ಲ, ಎಲ್ಲಾ..... ಯೆಂತಕ್ಕೆ ಕೊಲೆ ಮಾಡಿದ್ದು, ಅತ್ತೆ?"

ಕಮಲತ್ತೆಯೇ ಏನಾದರೂ ಕೊಲೆ ಮಾಡಿದರೇನೋ ಎಂಬಂತಿತ್ತು ಅವಳ ಪ್ರಶ್ನೆ. ಅಲ್ಲದೆ, ಕಮಲತ್ತೆಗೆ ಅದು ಆಗಲೇ ಮರೆತೂ ಹೋಗಿತ್ತು. ಮಗ ಸತ್ತು ಒಂದು ವರುಷವೇ ಕಳೆದಿದ್ದರಿಂದ ಅದೀಗ ಹಳೆಕತೆ ಅವರಿಗೆ. ಅಷ್ಟಕ್ಕೂ ಅವರಿಗೆ ಅವನು ಅಂತಹ ಪ್ರೀತಿಪಾತ್ರ ಮಗನೇನೂ ಆಗಿರಲಿಲ್ಲವಲ್ಲ.... ಈ ಯಾವಳೋ ಇವಳು ಬಂದು ತಮ್ಮ ಸಂತೋಷವನ್ನು ಕೆಡಿಸುತ್ತಿದ್ದಾಳಲ್ಲ ಅನ್ನಿಸಿತು ಅವರಿಗೆ. "ಆಯಿತು! ಎಂತ ಮಾಡುವುದು? ಯಾರ ಕೈಯಲ್ಲಿತ್ತು ಅದು, ಹೇಳು?" ಅಂದವರೇ "ತಿಂಡಿ ಆಯಿತಾ ನಿಂದು?" ಎಂದು ಮಾತು ಬದಲಾಯಿಸಿದರು.

ಮುಹೂರ್ತ ಸಮೀಪಿಸುತ್ತಿತ್ತು. ಹುಡುಗ ಆಗಲೇ ಬಂದಿದ್ದ.

"ಮಂಟಪದಲ್ಲಿ ಯಾರೂ ಇಲ್ಲ. ಎಂತಾ ಎಲ್ಲಾ ಇಲ್ಲಿ ಸೇರಿ ಗೌಜು. ತಿಂಡಿಯಾದವರೆಲ್ಲಾ ಮಂಟಪಕ್ಕೆ ಬಂದು ಕೂರಿ, ನೋಡೋಣ" ಯಾರೋ ಅಬ್ಬರಿಸುತ್ತಿದ್ದರು: ಮತ್ಯಾರೋ ದುಡು ದುಡು ಓಡುತ್ತಾ ಮಂಟಪಕ್ಕೆ ಹೋದರು.

ಕಮಲತ್ತೆ ತೆವಳುವ ಹಾಗೆ ಹೆಜ್ಜೆ ಇಡುತ್ತಾ, ಮಂಟಪದ ಹತ್ತಿರ ನಡೆದರು.

"ಅತ್ತೆ ತಿಂಡಿ ತಿನ್ನಿ... ಬನ್ನಿ... ಊಟ ತಡವಾಗುತ್ತೆ. ಹಾಗೇ ಖಾಲಿ ಇರಬೇಡಿ" ತಿಂಡಿಯ ಕಾರ್ಯ ವಹಿಸಿಕೊಂಡಿದ್ದ ಅವರ ಕಡೇ ಸೊಸೆ ಅತ್ತೆಗೆ ಹೇಳಿದಳು.

"ಏ ಆಶಾ, ಮಗೂಗೆ ಹಸೆಗೆ ಬರುವುದಕ್ಕೆ ಮುಂಚೆ ನಾಗಮುರಿಗೆ ಹಾಕ್ಕೊಳಕ್ಕೆ ಮರೀಬೇಡಾಂತ ಹೇಳು" ಕಮಲತ್ತೆ ಧ್ವನಿ ಅವರಿಗೇ ತಿಳಿಯದ ಹಾಗೆ ಅಂಗಲಾಚುತ್ತ ಸರಿದಿತ್ತು.

"ಯಾಕೇ ಅತ್ತೆ ನಿಮಗೆ ಸಂಶಯ? ಅವಳ ಮದುವೆಗೋಸ್ಕರಾಂತಲೇ ಮಾಡಿಸಿದೀರಾ... ಹಾಕ್ಕೋಳಲ್ಲವಾ?" ಎಂದು ಅತ್ತೆಯನ್ನೇ ಪ್ರಶ್ನಿಸಿ, "ಬನ್ನಿ ಅತ್ತೆ, ಅಲ್ಲೊಂದು ಬಾಳೆಲೆ ಖಾಲಿ ಇದೆ" ಎಂದು ಅವಸರ ತೋರಿ, ಮಹಾ ಅನುಕಂಪದಿಂದ ಎಂಬಂತೆ ಕಮಲತ್ತೆಯನ್ನ ಒಂದು ಮೂಲೆಯ ಬಾಳೆ ಎಲೆ ಎದುರು ಕೂರಿಸಿದಳು.

ಎದುರು ಕುಳಿತವರು ಗಂಡಿನವರೋ, ಹೆಣ್ಣಿನವರೋ ತಿಳಿಯದ ಹಾಗೆ ಮತ್ತೆ ಮಸುಕು, ಮಸುಕು...

"ಹುಡುಗಿಯ ಅಜ್ಜಿಯಂತೆ ಇದು!". ಎದುರು ಸಾಲಿನಲ್ಲಿ ಯಾರೋ ತಮ್ಮ ಅಚ್ಚ ಬೆಂಗಳೂರು ಭಾಷೆಯಲ್ಲಿ ಕಮಲತ್ತೆ ಬಾಳಿ ಬಂದ ಘನತೆಯ ಬದುಕನ್ನು ಒಂದೇ ವಾಕ್ಯದಲ್ಲಿ ತೂಗುವ ಹಾಗೆ ಉಪಯೋಗಿಸಿದ್ದ "ಇದು!" ಅವರ ಕಿವಿಗೆ ಅಪ್ಪಳಿಸಿ, ಮನೆ ತುಪ್ಪವೇ ಹಾಕಿ ಮಗ ಮದುವೆಗಾಗಿ ತಯಾರಿಸಿದ್ದ ರುಚಿರುಚಿ ಕೇಸರಿ ಭಾತ್ ಅವರ ಗಂಟಲಿಂದ ಇಳಿಯದಾಯಿತು. ಇಡ್ಲಿಯೂ ಗಂಟಲಲ್ಲಿ ಒತ್ತಿ, ಎರಡು ಗುಟುಕು ನೀರು ಕುಡಿದರು.

"ಹೋದ ವರುಷ ಪೇಪರಲ್ಲಿ ಸುದ್ದಿ ಆಯಿತಲ್ಲ, ಇವರ ಮನೆಗೆ ಸೇರಿದ ಕೊಲೆಯಾದ ಆ ಹುಡುಗ ಈಕೆಗೆ ಏನಾಗಬೇಕಂತೆ?''

''ಈಕೆಯ ನಾಲ್ಕನೇ ಮಗನಂತೆ''
''ಮಗನಾ!?''

ಪ್ರಶ್ನೆಗಳನ್ನು ಕೇಳುತ್ತಿದ್ದ ಎದುರು ಕುಳಿತ ಒಬ್ಬಾಕೆ ತಿಂಡಿ ತಿನ್ನುವುದನ್ನೂ ನಿಲ್ಲಿಸಿ, ನಿಬ್ಬೆರಗಾಗಿ ಕಮಲತ್ತೆಯನ್ನೇ ನೇರವಾಗಿ ನೋಡಿದಾಗ ಅವರು ಇನ್ನು ತಿಂಡಿ ತಿಂದ ಹಾಗೇ ಅನ್ನಿಸಿ ಮತ್ತೊಂದೆರಡು ಗುಟುಕು ನೀರು ಕುಡಿದರು.

''ಆ ಸೊಸೆ ಬಂದಿದ್ದಾಳಾ?''

"ಇದ್ದ ಹಾಗೆ ಇಲ್ಲ''

ಮಾತು ಮುಂದುವರಿಯುತ್ತಿದ್ದಂತೇ ಅವರೆದ್ದು ಕೈ ತೊಳೆಯಲು ಹೋದರು. ವಾಂತಿ ಆಗುವಂತೆನ್ನಿಸಿ ಸ್ವಲ್ಪ ಹೊತ್ತು ಬಚ್ಚಲಲ್ಲೇ ನಿಂತರು. ನಂತರ ಸುಧಾರಿಸಿಕೊಂಡು, ''ಏ ಇವಳೇ ನಾ ಮಂಟಪದಲ್ಲಿ ಕೂತಿರುತ್ತೇನೆ'' ಎಂದು ಯಾರೂ ಕೇಳದಿದ್ದರೂ, ಕಣ್ಣ ಮುಂದೆ ಸರಿದ, ಆ ಮನೆಯ ಹುಡುಗಿ ಅನ್ನಿಸಿದ ಯಾರಿಗೋ ಹೇಳಿ ಮಂಟಪಕ್ಕೆ ಬಂದು, ಮಧ್ಯದ ಒಂದು ಜಾಗದಲ್ಲಿ ಕುಳಿತರು.

ಹುಡುಗ ಹಸೆಯಲ್ಲಿದ್ದ. ಮದುವೆಯ ಕಾರ್ಯಗಳು ನಡೆಯುತ್ತಿದ್ದವು. ಕಮಲತ್ತೆ ಒಮ್ಮೆ ಕಣ್ಣಾಡಿಸಿ, ತಾವು ಕೂತಿದ್ದನ್ನು ಯಾರಾದರೂ ನೋಡಿ, ತಮ್ಮನ್ನು ಮಾತನಾಡಿಸಲು ಬರಬಹುದೆಂದು ಕಾದರು.

ಯಾರೂ ಬಾರದಾಗ, ಕಣ್ಣಿಗೆ ಕಂಡವರನ್ನೆಲ್ಲಾ ಇಣಿಕಿ ನೋಡಿದರು. ತಮ್ಮ ಹೆಣ್ಣು ಮಕ್ಕಳಾದರೂ, ಯಾರಾದರೂ ಅಲ್ಲಿ ಕುಳಿತಿರುವರೇ ಹುಡುಕಿದರು. ಕಣ್ಣಿಗೆ ಯಾರೂ ಕಾಣದಾಗ ಥತ್ ಎಲ್ಲಿ ಹಾಳಾದವೋ ಎಂದು ಮನದಲ್ಲೇ ಗುಡುಗಿದರು. ಅದಾಗ-ಆಗ ಅವರ ಹೊಟ್ಟೆಯಾಳದಿಂದ ಉಮ್ಮಳಿಸಿ ಬರುವ, ಕಾದಿಟ್ಟ ನೆನಪಿನಂತೆ ಮದುವೆಗೆ ಬಾರದ ಒಂದು ಹೆಣ್ಣು ಮಗಳ ನೆನಪಾಗುತ್ತಿದ್ದಂತೇ ''ಮುಹೂರ್ತ ಸಮೀಪಿಸುತ್ತಿದೆ. ಹುಡುಗಿ ಕರೆತನ್ನಿ' 'ಎಂದು ಪುರೋಹಿತರು ಗುಡುಗಿದ ಹೊಡೆತಕ್ಕೆ, ನೆನಪಾದದ್ದು ಏನು ಎಂಬುದೂ ಮರೆತು, ನೆನಪಾಗಿ ಉಳಿದ ನಾಗಮುರಿಗೆಯನ್ನು ಮಗು ಹಾಕಿಕೊಂಡಿತೋ ಇಲ್ಲವೋ ಎಂಬುದೇ ಸದ್ಯದ ಚಡಪಡಿಕೆಯಾಗಿ, ಯಾರನ್ನಾದರೂ ಕರೆಯಬೇಕೆಂದು ನೋಡಿದರೆ... ಏನು ನೋಡುವುದು ? ಅದೆಲ್ಲಿದ್ದರೋ? ಸಟ್ಟನೆ ದೊಂಬಿಯಂತೆ ಜನರು ನಾನು ತಾನೆಂದು ಮಂಟಪಕ್ಕೆ ನುಗ್ಗಿ, ನುಗ್ಗಿ, ಬರುವವರೇ!

ಅವರು ಕುಳಿತಲ್ಲಿಂದ ಎದ್ದು, ''ಏಯೀ ಇವಳೇ, ಏಯೀ ಇವಳೇ'' ಎಂದು ಕಂಡವರನ್ನೆಲ್ಲಾ ಕರೆಯುತ್ತ, ದೌಡಾಯಿಸುತ್ತಿದ್ದ ಜನರ ನಡುವೆ ದಾರಿ ಮಾಡಿಕೊಳ್ಳುತ್ತಾ, ''ಆಶಾ....ವನಮಾಲಾ? ವಿಶಾಲಾಕ್ಷಿ, ಶಕುಂತಲಾ, ಸುಕನ್ಯಾ? ಎಂದು ಬಾಯಿಗೆ ಬಂದ ಸೊಸೆಗಳ, ಹೆಣ್ಣುಮಕ್ಕಳ ಹೆಸರುಗಳನ್ನೆಲ್ಲಾ ಕರೆಯುತ್ತಾ, ''ಏಯೀ ಶಾರದೇ...''ಎಂದು ಮಧ್ಯ ಮದುವೆಗೆ ಬಾರದ ಮಗಳ ಹೆಸರೂ ಸೇರಿ ಹೋಗಿದ್ದರ ಅರಿವೂ ಇರದೇ, ವಾಲಗದ ಸದ್ದಿನ ಜತೆ, ಪುರೋಹಿತರ ಮಂತ್ರದ ಜತೆ, ನೆರೆದವರ ಗದ್ದಲದ ಜತೆ ಹೊಂದದೇ, ಅರಚಿಕೊಳ್ಳುತ್ತಿರುವ ತಮ್ಮ ಧ್ವನಿ, ಹಾಗೇ ಒಂಟಿಯಾಗಿ ತಮ್ಮ ಕಿವಿಗೇ ವಾಪಸಾಗಿ ಬಡಿಯತೊಡಗಿದಾಗ... ಥತ್ ಹಾಳಾಗಲಿ ಎಂದು ಗೊಣಗಿಕೊಂಡು, ಗೊತ್ತಿದ್ದವರು ಯಾರು ಕಂಡಾರು ಎಂದು ಆ ಸಂದಣಿಯಲ್ಲಿ ಕಣ್ಣ ಎದುರು ಕಂಡವರ ಕೈ ಹಿಡಿದೆಳೆದು ತಂದು, ''ಯಾರು ನೀನು?'' ಯಾರು ನೀನು?'' ಎಂದು ವಿಚಾರಿಸುತ್ತಾ ಹೋದರು.

"ಯಾರು ಬಿಟ್ಟು, ಯಾರು ಬಿಟ್ಟು ನೀನ್ಯಾರು?'' ಎಂದು ಮಕ್ಕಳು ಆಡುವ ಆಟದಂತೆ ಸಿಕ್ಕವರನ್ನೆಲ್ಲಾ ಬಿಟ್ಟು, ಬಿಟ್ಟು ಸಿಗದವರನ್ನು ಹುಡುಕುತ್ತಾ ಸ್ವಲ್ಪ ಹೊತ್ತು ಸುತ್ತಿದ ಬಳಿಕ, ಸೋದರಮಾವನ ಜೊತೆ ಹಸೆಗೆ ಬರುತ್ತಿದ್ದ ಹುಡುಗಿಯೇ ಅವರಿಗೆ ಎದುರಾದಳು.

"ಏಯೀ ಇವಳೇ! ಏಯೀ ಇವಳೇ ! ಮಗೂ ನಾನು ಕಣೇ. ನಾಗಮುರಿಗೆ ಕೈಗೆ ಹಾಕಿಕೊಂಡಿಯಾ?'' ಎಂದು ಮೊಮ್ಮಗಳನ್ನು ಹಿಡಿದು ನಿಲ್ಲಿಸಿ, ಅಲುಗಿಸಿ, ಕೈಯಲ್ಲಿ ಅವಳ ತೋಳನ್ನ ಬಳಚಿ, ನಾಗಮುರಿಗೆ ಸಿಗದಾಗ ಪೆಚ್ಚಾಗಿ, ''ಯಂತಾ ಹೆಣ್ಣೇ, ಕಡೆಗೂ ಮರೆತೆಯಾ?'' ಎಂದು ಹತಾಶೆಯಿಂದ ಕೇಳಿದ್ದರು.

ಅಯ್ಯೋ ದೊಡ್ಡಮ್ಮ....ಕಡೀಗೂ ಮರ್ತೇ ಹೋಯ್ತಾ...? ಇರಿ, ಈಗ ಹಾಕ್ಕೋಳತೀನಿ....ಅವಳು ಹಿಂತಿರುಗಿ, ''...ಅತ್ತೆ....! ಓಯೀ ಶಕುಂತಲತ್ತೇ... ದೊಡ್ಡಮ್ಮಾ ಕೊಟ್ಟ ನಾಗಮುರಿಗೆ ಒಳಕೋಣೆ ಬೀರಲ್ಲಿ ಇದೆ. ಸ್ವಲ್ಪ ತಂದ್‌ಕೊಡ್‌ತೀರಾ....?'' ಎಂದು ಕೇಳಿ, ಹಾಗೇ ನಿಂತಳು.

ಅಷ್ಟು ಹೊತ್ತಿಗೆ ಪುರೋಹಿತರು ಕಿರುಚತೊಡಗಿದರು. ''ಮುಹೂರ್ತ ಬಂದಾಗಿದೆ. ಯಾರು ಅದು ಸೋದರ ಮಾವ....ಹುಡ್ಗೀನ ಕರೆತನ್ನಿ ನೋಡುವಾ....''

''ಅದನ್ನ ನೀ ಆಮೇಲೆ ಹಾಕ್ಕೊಳೇ. ಹೋಗೇ ಈಗ....'' ಮತ್ಯಾರೋ ಅವಳನ್ನ ದೂಡುತ್ತಾ ಅವಸರಪಡಿಸಿದರು. ಹುಡುಗಿ ಮಂಟಪಕ್ಕೆ ಹತ್ತಿರವಾಗುತ್ತಿದ್ದ ಹಾಗೇ ಇನ್ನಷ್ಟು ಮತ್ತಷ್ಟು ಮಂಗಳವಾದ್ಯಗಳು ಜೋರಾಗುತ್ತಾ ಕಿವಿಗಡಚಿಕ್ಕತೊಡಗಿದವು.

ಕಮಲತ್ತೆ ಹಾಗೇ ನಿಂತರು, ತಾನು ಮಂಟಪದ ಒಳಗಿದ್ದೇನೆಯೋ ತಿಳಿಯಲಿಲ್ಲ ಅವರಿಗೆ ಒಂದುಕ್ಷಣ. ಎಲ್ಲರೂ ಮಹಾಸಂಭ್ರಮದಿಂದ ಇಡೀ ಮದುವೆ ತಮ್ಮ ಕಾಲ ಮೇಲೇ ನಿಂತಹಾಗೆ ಸರಬರ ಓಡಿಯಾಡುವವರೇ...

ಅವರ ಕಣ್ಣ ಮುಂದೆ ಯಾರೋ ನಾಗಮುರಿಗೆ ಎತ್ತಿಕೊಂಡು ಬಂದ ಹಾಗೆ ಅಷ್ಟೇ ಕಾಣಿಸಿತು. ಅದೂ ಮಸುಕು ಮಸುಕು....ಅದರ ಬಗ್ಗೆ ಯಾರಾದರೂ ಮಾತನಾಡಬಹುದೆಂದು ಕಾದರು....ಕಾದರು.....ಕಾದರು.....


ಆಗ ಪಕ್ಕದಲ್ಲೇ ಹೊರಟ ಒಂದು ಕೀರಲು ಧ್ವನಿ ಅವರ ಕಿವಿಗೆ ಬಿತ್ತು. ''...ಅದೆಂತಾ ಹುಡುಗಿಯ ಕೈಗೆ ಈಗ ಹಾಕುತ್ತಿರುವುದು....'' ಕೇಳಿದವರು ಯಾರೆಂದು ಧ್ವನಿಯಿಂದ ಗುರುತಿಸುವುದು ಸಾಧ್ಯವಿರಲಿಲ್ಲ. ಕಣ್ಣಿನಿಂದಂತೂ ಇನ್ನೂ ಅಸಾಧ್ಯವಾದದ್ದು. ಆದರೂ ಅವರು ಒಮ್ಮೆ ತಲೆ ಸಂಪೂರ್ಣ ಹೊರಳಿಸಿ ಮಗ್ಗುಲಿಗೇ ತಿರುಗಿನಿಂತು ನೋಡಿದರು.

ಈಗ ಇನ್ನಾರೋ ಉತ್ತರಿಸುತ್ತಿದ್ದರು. ನಾಗಮುರಿಗೆ ಅಂತೆ...! ಆ ಹುಡುಗಿಯ ಅಜ್ಜಿ ಕಡೆಯದಂತೆ. ''ದೇವರೇ?'' ಕೇಳಿದವಳು ಉದ್ಗರಿಸಿ, ಸ್ವಲ್ಪ ಹೊತ್ತಿನ ನಂತರ, ''....ಈಗಿನ ಕಾಲದಲ್ಲೂ ಇವೆಲ್ಲಾ ಬೇಕಾ....?'' ಎಂದು ಕೇಳಿದ್ದು ಕಿವಿಗೆ ಬಿದ್ದು, ಕಮಲತ್ತೆಯ ರಕ್ತ ಸರ್ರನೆ ಕುದ್ದು ಹೋಯಿತು.

''ಯಾರೋ ಮಾಡಿಸುವ ಯೋಗ್ಯತೆ ಇಲ್ಲದವಳು ಆಡಲಿಕ್ಕೆ ಏನಡ್ಡಿ....'' ಎಂದು ಮನಸ್ಸಿನಲ್ಲೇ ಹಲ್ಲು ಮುಡಿ ಕಚ್ಚಿದರು. ಆಗ-ಅದಾಗ ಮಗ್ಗುಲಲ್ಲೇ ಚಿರಪರಿಚಿತವಾದ ಒಂದು ಧ್ವನಿ ಅವರ ಕಿವಿ ಸೀಳಿತು.

''ಅಲ್ಲಾ ಅತ್ತೆಗೆ ಈ ವಯಸ್ಸಿನಲ್ಲೂ ಇದೆಂತಾ ಹುಚ್ಚು....! ತಮ್ಮ ಮಗನನ್ನ ಕಳೆದುಕೊಂಡ ನೆನಪೂ ಇವರಿಗಿಲ್ಲವಾ....! '' ಯಾರದು? ಭಾವಯ್ಯನವರ ಸೊಸೆಯೇ-ವಾಸಂತಿ ಸ್ವರ ತರವಿದೆ....? ಹದಿನಾಲ್ಕು ಸಾವಿರ ದುಡ್ಡು ಕೊಡಲಾಗದೇ ಅವನ ಕೊಲೆಯಾಯಿತು.... ಇಲ್ಲಿ ನೋಡಿದರೆ, ಅದಕ್ಕೆ ಇಪ್ಪತ್ತು ಸಾವಿರ ಅನ್ನುವರಪ್ಪ, ಅವನ ಜೀವನದ ಬೆಲೆಯೇ ಇದೆ ಅದರೊಳಗೆ....'' ಕಮಲತ್ತೆ ಯಾರೋ ಚಾಟಿಯಿಂದ ಹೊಡೆದಂತಾಗಿ, ಮತ್ತೊಂದು ಮಗ್ಗುಲಿಗೆ ಹೊರಳಿ ನೋಡಿದರು. ಅಲ್ಲಿ ಅವರಿಗೆ ಯಾರೂ ಕಾಣಲಿಲ್ಲ. ಹೇಳಿದವಳು ವಾಸಂತಿಯೇ....ಜಲಜಾಳೇ....ಸುಮತಿಯೇ ಒಂದೂ ಅವರಿಗೆ ತಿಳಿಯಲಿಲ್ಲ.

ಗಡಚಿಕ್ಕುವ ಮಂಟಪ ಸದ್ದು ಒಂದು ಕಡೆ. ಕಣ್ಣು ಕೋರೈಸುವ ನಾನಾ ಬಣ್ಣದ ಪುಟ್ಟ ಪುಟ್ಟ ಬಲ್ಬಿನ ದೀಪಗಳು ಮತ್ತೊಂದೆಡೆ...ಅನೇಕ ವರುಷಗಳಿಂದ ತಾವು ಭದ್ರ ಮಾಡಿ, ಊರೂರು ಸುತ್ತಿ ಕಡೆಗೆ ಉಡುಪಿಯ ಬಳಿಯ ಅಕ್ಕಸಾಲಿಯ ಕೈಯಲ್ಲಿ ಮಾಡಿಸಿದ ಹಳೇಕಾಲದ ನಾಗಮುರಿಗೆ ಮಾತ್ರ ಅವರ ಮಂದ ಕಣ್ಣುಗಳ ಮುಂದೆ ಅಪ್ಪಳಿಸುವ ಹಾಗೆ ಮೆರೆಯುತ್ತಿತ್ತು.

ಜಡೆಯಂತೆ ಸಣ್ಣ ಹೆಣಿಗೆಯ ಒತ್ತು ನೇಯ್ಗೆ ಬಾಲದ ತುದಿವರೆಗೂ ಇಡಿಸಿದ ಮಿಣಿ ಮಿಣಿ ಮಿನುಗುವ, ಚಿಕ್ಕ ಚಿಕ್ಕ ಮೆಣಸಿನ ಗುಂಡುಗಳು, ತಲೆ ಭಾಗದಲ್ಲಿ ಹೆಡೆ ಎತ್ತಿ ಐದು ಬೆರಳಿನಂತೆ ಇಷ್ಟಗಲ ಬಿಚ್ಚಿನಿಂತ ನಾಗರ... ತಮ್ಮ ಐದು ಗಂಡು ಮಕ್ಕಳ ತಲೆಯೂ ಅಲ್ಲಿ ಮಿಂಚುತ್ತಿರುವ ಹಾಗೆ... ಆದರೆ ಮಧ್ಯದ ಒಂದು ಬೆರಳು ಹೇಗೋ ಮೊಟಕಾಗಿದೆ.... ಹೆಡೆಯ ನೆತ್ತಿಯ ಮೇಲೆ ಕೂರಿಸಿದ್ದ ಕೆಂಪು ಹರಳಿನ ಪ್ರಜ್ವಲ ಬೆಳಕು ಅದರ ಮೇಲೆ ಮಾತ್ರ ಬಿದ್ದು ಮೊದಲೇ ಮೊಟಕಾದ ಆ ಬೆರಳಿನ ಮೇಲೆ ಇದ್ದಕ್ಕಿದ್ದಂತೆ ಓಕುಳಿಯಾಡುತ್ತಿರುವ ರಕ್ತ.... ಈಗ ಬಾಲದ ತುತ್ತತುದಿಯಲ್ಲಿ ಇರಿಸಿದ ಆ ನಾಲ್ಕೇ ನಾಲ್ಕು ಮುತ್ತುಗಳು ನಾಲ್ಕು ಹೆಣ್ಣು ಮಕ್ಕಳಂತೆ ಬಳುಕುತ್ತಾ ಮುಂದೆ ಸರಿಯುತ್ತಿವೆ.... ಬಾಲ ಸ್ವಲ್ಪ ಆಡಿದರೂ ಸಾಕು, ಅದರ ತಾಳಕ್ಕೆ ತಕ್ಕ ಹಾಗೆ ನೇತಾಡುತ್ತಾ ಲಯಬದ್ಧವಾಗಿ ತಲೆದೂಗುವ ಆ ಮುತ್ತಿನಲ್ಲಿ- ಅರೇ, ಹೌದಲ್ಲ ಒಂದು ಒಡೆದುಕೊಂಡಿದೆ.....

ಆಗಲೇ ಬಿರುಕು ಬಿಟ್ಟ ಅದು ಕತ್ತಲ ಆಳದಲ್ಲಿ ಎಲ್ಲವೂ ಪೊಳ್ಳು-ಖಾಲಿ ಎಂದು ತೋರಿಸುತ್ತಿದೆ......ಬಿಚ್ಚಿದ ಹೆಡೆಯ ಮಧ್ಯದಲ್ಲಿರುವ ಕರಿಮಚ್ಚೆಯ ಜಾಗದಲ್ಲಿ ವಿ ಆಕಾರದಲ್ಲಿ ಕೂರಿಸಿರುವ ಕೆಂಪು ಹರಳುಗಳು ಥಳಥಳ ಹೊಳೆದು, ಕೆಂಗಣ್ಣಾಗಿ, ಇನ್ನೊಂದು ಕ್ಷಣದಲ್ಲಿ ಭುಸುಗುಡುತ್ತಾ, ಇಡೀ ಮಂಟಪದ ಸುತ್ತಾ, ಅತ್ತಿಂದಿತ್ತ ಇತ್ತಿಂದತ್ತ ಹರಿದಾಡುತ್ತಾ, ಕ್ಷಣದಲ್ಲಿ ಎಲ್ಲವನ್ನೂ ಧ್ವಂಸ ಮಾಡುವಂತೆ ನಾಲಿಗೆ ಚಾಚುತ್ತಿದೆ. ಅದರ ಕಣ್ಣು ಅತ್ತಿತ್ತ ಚಲಿಸಿ- ಹೌದಲ್ಲ- ಈಗ ಸ್ಥಿರವಾಗಿ ತಮ್ಮತ್ತಲೇ ನೆಟ್ಟಿದೆ. ತಾವೀಗ ಓಡಬೇಕು....ಓಡಬೇಕು...

ಅವರು ಬಾಯಿ ತೆರೆದರು. ತಮ್ಮ ಸೊಸೆಯಂದಿರನ್ನು ಕೂಗಬೇಕು ಎಂದುಕೊಂಡರು. ತಮ್ಮ ಗಂಡುಮಕ್ಕಳನ್ನು ಕರೆಯಬೇಕು ಎಂದುಕೊಂಡರು. ಮಸುಕಾದ ತಮ್ಮ ಕಣ್ಣಿಗೆ ಏನೂ ಕಾಣದಂತಾಗಿ,ಕೈ ಅಡ್ಡ ಹಿಡಿದು, ಯಾರು....ಯಾರು.....ಯಾರಲ್ಲಿ....ಎಂದು ತೊದಲಲು ಹೋದವರಿಗೆ ಇದ್ದಕ್ಕಿದ್ದಂತೇ ಬಾಯಿ ಗೊರ.....ಗೊರ...ಅಂತೆನ್ನಿಸಿ, ಶಾರದೇ....ಶಾರದೇ....ಶಾರದೇ...ಎಂದು ತಾವು ಕರೆಯುತ್ತಿರುವುದು ಯಾರನ್ನು ಎಂಬುದು ತಮಗೇ ತಿಳಿಯದಂತೆ. ಅಂಥಾ ಒಬ್ಬಳು ಆ ಮನೆಯಲ್ಲಿ ಹುಟ್ಟಿದ್ದಳೇ ಇಲ್ಲವೇ ಎಂಬುದರ ಅರಿವು ಇರದವರಂತೆ ಬಾಯಿ ತುಂಬಾ ಕರೆಯುತ್ತಾ....ಅಥವಾ ಕರೆಯುತ್ತಿರುವವರಂತೆ ಬಾಯಿ ಅಲ್ಲಾಡಿಸುತ್ತಾ.... ತುಂಬಿದ ಮದುವೆಯ ಮನೆಯಲ್ಲಿ ಒಂದು ಶೂನ್ಯ ನೋಟ ಚೆಲ್ಲಿ ಮಂಕಾಗಿ, ಪೆಚ್ಚಾಗಿ, ಮಿಣಿಮಿಣಿಯಾಗಿ ನಿಂತವರು-ಹಾಗೇ ನಿಂತಿದ್ದರು...