ಕಿರು ನಗೆಯ ಪ್ರೇಮಾಯಣ

ಆ ಸುಂದರಿ ದಿನನಿತ್ಯ ದಾರಿಯಲ್ಲಿ ಹೋಗುವಾಗ ಸುಂದರ ಕಿರುನಗೆ ಬೀರುತ್ತಿದ್ದಳು. ಒಂದು ತಿಂಗಳಿಂದ ಈ ನಗುವಿನ ವ್ಯಾಪಾರ ಮನೆಯಾಚೆಯ ಕಿಟಿಕಿಯಿಂದ ನಿರಂತರವಾಗಿ ಸಾಗಿದ್ದರೂ ಸುನಿಲ್‌ಗೆ ಮಾತ್ರ ಮಾತನಾಡಿಸುವ ಧೈರ್ಯ ಹುಟ್ಟಲೇ ಇಲ್ಲ. ಆದರೆ ಇಂದು ಮಾತ್ರ ಒಂದಿಷ್ಟು ಧೈರ್ಯ ತಂದುಕೊಂಡು ಮಾತನಾಡಿಸಬಾರದೇ ಎಂದು ಮನಸ್ಸು ಒತ್ತಾಯಿಸುತ್ತಿತ್ತು.

ಕೊನೆಗೆ ಧೈರ್ಯ ಮಾಡಿ ಅವಳನ್ನು ಕಂಡಕೂಡಲೇ ಸುನಿಲ್ ಕೈಯತ್ತಿ ವಿಷ್ ಮಾಡಿದನು. ಟಾಟಾ ಮಾಡುತ್ತಿದ್ದ ಅವನನ್ನು ನೋಡಿ ಕೆಲ ಕಾಲ ಗಂಭೀರವಾದಳು. ಅವಳಿಗೆ ಕೋಪ ಬಂದಿರಬಹುದು ಎನ್ನುತ್ತಿರುವಾಗಲೇ ಅವಳು ಟಾಟಾ ಮಾಡುತ್ತಿರುವುದನ್ನು ಕಂಡು ಸುನಿಲ‌್‌ಗೆ ಸಂತೋಷ ಉಕ್ಕಿ ಹರಿಯಿತು. ಆ ಸಂತೋಷದಲ್ಲಿ ನೇರವಾಗಿ ಆಫೀಸ್‌ಗೆ ನಡೆದ. ಆ ನಂತರ ಪ್ರತಿನಿತ್ಯ ಅವಳನ್ನು ನೋಡಿದ ಕೂಡಲೇ ಟಾಟಾ ಮಾಡುವುದು ಸಾಮಾನ್ಯವಾಯಿತು.

ಅವಳ ನಗು, ಸುಂದರ ರೂಪ, ಕಣ್ಣೆದುರು ಬಂದಂತಾಗಿ ಹಗಲು ಇರಳು ಅವಳದೇ ನೆನಪು ಕಾಡತೊಡಗಿತು. ಕೊನೆಗೂ ಅವಳ ಹೆಸರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದನು. ಆಫೀಸ್‌‌ನಲ್ಲಿ ಆತ್ಮಿಯ ಗೆಳೆಯನಾದ ವಂಶಿಗೆ ಅವಳ ಸೌಂದರ್ಯವನ್ನು ಬಣ್ಣಿಸಿ, ಅವಳ ಹೆಸರು ಮಯೂರಿ ಎಂದು ತಿಳಿಸಿದ.

ದಿನಗಳು ತಿಂಗಳು ಸಂತೋಷದಲ್ಲಿ ಸರಿದುಹೋದವು. ಒಂದು ದಿನ ''ಸುನಿಲ್ ನಿನ್ನ ಮಾವನವರು ನಿನ್ನ ಮದುವೆಗಾಗಿ ತುಂಬಾ ಪ್ರಯತ್ನಿಸುತ್ತಿದ್ದಾರೆ. ನಿನ್ನ ಒಪ್ಪಿಗೆಯಾದಲ್ಲಿ ಮುಹೂರ್ತವನ್ನು ನಿಗದಿಪಡಿಸಲು ಕಾಯುತ್ತಿದ್ದಾರೆ" ಎಂದು ಸುನಿಲ್‌ನ ಅಮ್ಮ ಪೀಠಿಕೆ ಹಾಕಿದರು. ಇದಕ್ಕಾಗೆ ಕಾಯುತ್ತಿದ್ದವನಂತೆ, ಮಯೂರಿಯನ್ನು ಬಿಟ್ಟು ಬೇರೆ ಹುಡುಗಿಯನ್ನು ಮದುವೆಯಾಗಲಾರೆ... ಅವಳ ತಂದೆ ತಾಯಿಯವರನ್ನು ಭೇಟಿ ಮಾಡಿ ಮುಹೂರ್ತವನ್ನು ನಿಗದಿಪಡಿಸಿ ಎಂದು ಸುನಿಲ್ ಪ್ರತಿನುಡಿದ.

ಮಗನ ಹಠದ ಬಗ್ಗೆ ಅರಿವು ಇದ್ದ ಸುನಿಲ್ ತಂದೆ ತಾಯಿಗಳು ಮಯೂರಿಯ ಮನೆಗೆ ಭೇಟಿ ನೀಡಿದರು. ಮಯೂರಿಯ ತಂದೆ ತಾಯಿಗಳು ಸಂತೋಷದಿಂದ ಮದುವೆ ಪ್ರಸ್ತಾಪ ಸ್ವೀಕರಿಸಿದರು. ಆದರೆ ತಮ್ಮ ಮಗಳಿಗೆ ಬಾಲ್ಯದಲ್ಲಿ ಪೋಲಿಯೋ ಕಾಡಿದ್ದರಿಂದ ಆಕೆಯ ಕಾಲುಗಳಿಗೆ ಬಲವಿಲ್ಲ ಎಂದು ನುಡಿದರು.

ತಾನು ಇಷ್ಟಪಟ್ಟ ಹುಡುಗಿಗೆ ಕಾಲು ಸರಿ ಇಲ್ಲ ಎಂದು ತಿಳಿದ ಸುನಿಲ್ ಆಪ್‌ಸೆಟ್‌ ಆಗಿ ಆಫೀಸ್‌ಗೆ ರಜೆ ಹಾಕಿ ಮಂಕಾಗಿ ಕುಳಿತಿದ್ದ. ಕೆಲ ದಿನಗಳ ನಂತರ ಮಾವನ ಮಗಳೊಂದಿಗೆ ಸುನಿಲ್‌ ಮದುವೆಯಾಯಿತು. ಮನಸ್ಸು ಅಸ್ತವ್ಯಸ್ತವಾಗಿದ್ದರಿಂದ ಸಿನಿಮಾ ನೋಡಲು ಹೋಗಿ ಟಿಕೆಟ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ. ಅಷ್ಟರಲ್ಲಿ ಆತನನ್ನುದ್ದೇಶಿಸಿ ಯಾರೋ ''ಹಲೋ'' ಎಂದರು. ಯಾರೆಂದು ನೋಡಿದಾಗ ಅದು ಮಯೂರಿ! ಹೇಗಿದ್ದೀರಿ ತುಂಬಾ ದಿನವಾಯಿತು ನಿಮ್ಮನ್ನು ನೋಡಿ, ಕಾಣಲೇ ಇಲ್ಲ ಎಂದು ವಿಚಾರಿಸಿದಳು.

ಅವಳನ್ನೊಮ್ಮೆ, ಕಾಲುಗಳನ್ನೊಮ್ಮೆ ನೋಡಿ ಕಾಲುಗಳು ಸರಿಯಾಗಿವೆ ಎಂದು ಮನದಲ್ಲಿ ಅಂದುಕೊಳ್ಳುತ್ತಿರುವಾಗಲೇ ಬರ್ತೀನಿ ಸಿನಿಮಾಗೆ ಲೇಟಾಯಿತು ಎಂದು ಹೇಳಿ ಜಿಂಕೆಯಂತೆ ಓಡಿದಳು. ಸುನಿಲ್ ಮಯೂರಿಯನ್ನು ತದೇಕ ಚಿತ್ತದಿಂದ ನೋಡಿದ. ತನ್ನ ಪ್ರೇಮ ಪರೀಕ್ಷೆಗಾಗಿ ಮಯೂರಿಯ ಹೆತ್ತವರು ಸುಳ್ಳು ಹೇಳಿದ್ದಾರೆಂದು ತಿಳಿದ ಸುನೀಲ್ ನೊಂದುಕೊಳ್ಳುವುದು ಬಿಟ್ಟರೆ ಬೇರೇನೂ ಮಾಡುವಂತಿರಲಿಲ್ಲ.

ವೆಬ್ದುನಿಯಾವನ್ನು ಓದಿ