ಸ್ಕಿಮ್ಮಿಂಗ್ ಮೆಶಿನ್ ಅಳವಡಿಸಿ ಮಾಹಿತಿ ಕದಿಯುತ್ತಿದ್ದ ವಿದೇಶಿಯರು ಅರೆಸ್ಟ್
ಶುಕ್ರವಾರ, 15 ಸೆಪ್ಟಂಬರ್ 2017 (13:22 IST)
ಎಟಿಎಂ ಕಾರ್ಡ್ ನಿಮ್ಮ ಬಳಿಯೇ ಇದ್ದರೂ ನಿಮ್ಮ ಅಕೌಂಟ್`ನಲ್ಲಿದ್ದ ಹಣ ಡ್ರಾ ಮಾಡಬಹುದು. ಹೌದು, ಇಂತಹ ಖದೀಮ ಕಳ್ಳರು ಬೆಂಗಳೂರಿಗೆ ಬಂದಿದ್ದಾರೆ. ಎಟಿಎಂ ಮೆಶಿನ್`ಗೆ ಸ್ಕಿಮ್ಮಿಂಗ್ ಮೆಶಿನ್ ಅಳವಡಿಸಿ ಹಣ ದೋಚುತ್ತಿದ್ದ ವಿದೇಶಿಯರನ್ನ ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನ ರೊಮೇನಿಯಾ, ಹಂಗೇರಿ ಮೂಲದ ಡ್ಯಾನ್ ಸ್ಯಾಬಿಯನ್ ಕ್ರಿಶ್ಚಿಯನ್, ಮಾರೆ ಜಾನೋಸ್ ಎಂದು ಗುರ್ತಿಸಲಾಗಿದೆ. ಈ ಇಬ್ಬರೂ ಖದೀಮರು ಎಟಿಎಂಗಳಲ್ಲಿ ಸ್ಕಿಮ್ಮಿಂಗ್ ಮೆಶಿನ್ ಅಳವಡಿಸಿ, ಎಟಿಎಂನ ಪಿನ್ ಮತ್ತು ಇತರೆ ಮಾಹಿತಿಗಳನ್ನ ಕದ್ದು, ಬಳಿಕ ಅದರ ಮಾಹಿತಿ ಆಧರಿಸಿ ನಕಲಿ ಕಾರ್ಡ್ ಬಳಸಿ ಹಣ ಡ್ರಾ ಮಾಡುತ್ತಾರೆ. ಬ್ರಿಗೇಡ್ ರೋಡ್, ಎಂ.ಜಿ. ರಸ್ತೆ, ಏರ್`ಪೋರ್ಟ್ ಸೇರಿದಂತೆ 5 ಸ್ಥಳಗಳಲ್ಲಿ ಸ್ಕಿಮ್ಮಿಂಗ್ ಮೆಶಿನ್ ಅಳವಡಿಸಿದ್ದ ಖದೀಮರು ಮಾಹಿತಿ ಕದ್ದಿದ್ದಾರೆ ಎಂದು ತಿಳಿದುಬಂದಿದೆ.
ಕೋಟಕ್ ಮಹೀಂದ್ರಾ ಬ್ಯಾಂಕ್ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಸಿಐಡಿ ಪೊಲೀಸರಿಗೆ ಬೆಚ್ಚಿ ಬೀಳಿಸುವ ಮಾಹಿತಿ ಸಿಕ್ಕಿದೆ. ಎಟಿಎಂಗಳಲ್ಲಿ ಅಳವಡಿಸಿದ್ದ ಸ್ಕಿಮ್ಮಿಂಗ್ ಮೆಶಿನ್ ಮೂಲಕ ಮಾಹಿತಿ ಕದಿಯುತ್ತಿದ್ದ ಖದೀಮರು ಬ್ರಿಟನ್ನಿನಲ್ಲಿ ಕುಳಿತಿರುವ ಮುಖ್ಯಸ್ಥನಿಗೆ ಮಾಹಿತಿ ರವಾನಿಸುತ್ತಿದ್ದರು. ಪ್ರವಾಸಿ ವೀಸಾ ಮೂಲಕ ಭಾರತಕ್ಕೆ ಬಂದಿದ್ದ ಈ ಖದೀಮರು ಬೆಂಗಳೂರಿನ ಪ್ರಸಿದ್ಧ ಹೋಟೆಲಿನಲ್ಲಿ ರೂಮ್ ಮಾಡಿ ಉಳಿದಿದ್ದರು. ಈ ಖದೀಮರು ಮಾಹಿತಿ ಕದ್ದಿರುವ ಬ್ರಿಗೇಡ್ ರೋಡ್, ಎಂ.ಜಿ. ರಸ್ತೆ, ಏರ್`ಪೋರ್ಟ್`ಗಳಲ್ಲಿನ ಎಟಿಎಂಗಳಲ್ಲಿ ಕಾರ್ಡ್ ಸ್ವೈಪ್ ಮಾಡಿರುವವರು ಕೂಡಲೇ ಪಿನ್ ಬದಲಿಸಿದರೆ ಉತ್ತಮ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ