ಬೆಂಗಳೂರು: 2003 ರಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಟೆಕಿ ಗಿರೀಶ್ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಭಾವೀ ಪತಿ ಗಿರೀಶ್ ನನ್ನು ಕೊಂದಿದ್ದ ಶುಭಾ ಮತ್ತು ಆಕೆಯ ಸಹಚರರಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್ ಕ್ಷಮಾದಾನದ ಅವಕಾಶ ನೀಡಿದೆ.
ಏನಿದು ಪ್ರಕರಣ?
ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ ಗಿರೀಶ್ ಮತ್ತು ಶುಭಾ ಮದುವೆಯನ್ನು ಮನೆಯವರೇ ನಿಶ್ಚಯ ಮಾಡಿದ್ದರು. ಆದರೆ ಶುಭಾಗೆ ಆಗಲೇ ಬೇರೊಬ್ಬನ ಜೊತೆ ಪ್ರೇಮವಿತ್ತು. ಆದರೆ ಮನೆಯವರ ಬಲವಂತಕ್ಕೆ ಗಿರೀಶ್ ಜೊತೆ ಮದುವೆಗೆ ಒಪ್ಪಿಕೊಂಡಿದ್ದಳು.
ನಿಶ್ಚಿತಾರ್ಥವಾಗಿ ನಾಲ್ಕು ದಿನಗಳ ಬಳಿಕ ಗಿರೀಶ್ ನನ್ನು ಬೆಂಗಳೂರಿನ ವಿವೇಕ ನಗರದಲ್ಲಿರುವ ರಿಂಗ್ ರಸ್ತೆಗೆ ಕರೆದೊಯ್ದು ಶುಭಾ ಮತ್ತು ಆಕೆಯ ಪ್ರಿಯಕರ ಅರುಣ್ ವರ್ಮಾ, ಸ್ನೇಹಿತರಾದ ದಿನೇಶ್, ವೆಂಕಟೇಶ್ ಸೇರಿಕೊಂಡು ಗಿರೀಶ್ ನನ್ನು ಕೊಲೆ ಮಾಡಿದ್ದರು. ಈ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು.
ಅಂದು ಅಪರಾಧಿಗಳಾಗಿ ಜೈಲು ಸೇರಿಕೊಂಡಿದ್ದ ಈ ಎಲ್ಲಾ ಆರೋಪಿಗಳ ಕೃತ್ಯ ಸಾಬೀತಾದ ಹಿನ್ನಲೆಯಲ್ಲಿ ಕರ್ನಾಟಕ ಹೈಕೋರ್ಟ್ ಜೀವಾವಧಿ ಶಿಕ್ಷೆ ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ನಾಲ್ವರೂ ಆರೋಪಿಗಳೂ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಇದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕುಟುಂಬದ ಬಲವಂತದಿಂದಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಗೆ ಮಾನಸಿಕವಾಗಿ ಗೊಂದಲವುಂಟಾಗಿ ಅಮಾಯಕ ಯುವಕನ ದುರಂತ ಅಂತ್ಯಕ್ಕೆ ಕಾರಣವಾಯಿತು. ಜೊತೆಗೆ ಇನ್ನೂ ಮೂವರ ಜೀವನ ಹಾಳಾಯಿತು. ಕೃತ್ಯದ ವೇಳೆ ಎಲ್ಲಾ ಆರೋಪಿಗಳೂ ಹದಿಹರೆಯದವರಾಗಿದ್ದರು. ಶುಭಾಳಿಗೆ ಗಿರೀಶ್ ನನ್ನೇ ಮದುವೆಯಾಗುವಂತೆ ಮನೆಯವರ ಒತ್ತಡ ಹೇರದೇ ಇದ್ದಿದ್ದರೆ ಈ ಘಟನೆ ಸಂಭವಿಸುತ್ತಲೇ ಇರಲಿಲ್ಲ. ಇನ್ನೊಬ್ಬನ ಜೊತೆಗೆ ಪ್ರೇಮಕ್ಕೆ ಒಪ್ಪದೇ ಆಕೆಯ ಮನಸ್ಸು ಪ್ರಕ್ಷುಬ್ಧವಾಗಿ ಈ ಕೆಲಸ ಮಾಡುವಂತೆ ಪ್ರೇರೇಪಿಸಿದೆ. ಈ ಪ್ರಕರಣವನ್ನು ನಾವು ವಿಭಿನ್ನ ದೃಷ್ಟಿ ಕೋನದಿಂದ ನೋಡಲು ಬಯಸುತ್ತೇವೆ. ಹೈಕೋರ್ಟ್ ನ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿಯುತ್ತೇವೆ. ಅದೇ ರೀತಿ ಕ್ಷಮಾದಾನ ಅರ್ಜಿ ಸಲ್ಲಿಸಲು ಅಪರಾಧಿಗಳಿಗೆ 8 ವಾರಗಳ ಕಾಲಾವಕಾಶ ನೀಡುವುದಾಗಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.