ರಾಜ್ಯದಲ್ಲಿ ಹವಾಮಾನ ವೈಪರೀತ್ಯ ನಿಯಂತ್ರಿಸಲು 2025 ರ ವೇಳೆಗೆ 20 ಲಕ್ಷ ಕೋಟಿ ರೂ. ಅಗತ್ಯ

ಶುಕ್ರವಾರ, 19 ನವೆಂಬರ್ 2021 (20:25 IST)
ರಾಜ್ಯದಲ್ಲಿನ ಹವಾಮಾನ ವೈಪರೀತ್ಯ ನಿಯಂತ್ರಿಸಲು 2025 ರ ವೇಳೆಗೆ 20,88,041.23 ಕೋಟಿ ರೂ. ಬಜೆಟ್ ನ ಅಗತ್ಯವಿದೆ ಎಂದು ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ.
2015ರ ಹವಾಮಾನ ಬದಲಾವಣೆಯ 2ನೇ ಅವೃತ್ತಿಯ ಕರಡು ಮೂಲಕ ಈ ಮೊತ್ತವನ್ನು ಅಂದಾಜಿಸಲಾಗಿದ್ದು, 2030ರ ವೇಳೆಗೆ 52,82,744.32 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ವರದಿ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಸಂಶೋಧನಾ ಸಂಸ್ಥೆಯ ಮಹಾನಿರ್ದೇಶಕ ಜಗಮೋಹನ್ ಶರ್ಮಾ, ರಾಜ್ಯದಲ್ಲಿ ಬೇಸಿಗೆ ಮತ್ತು ಚಳಿಗಾಲದಲ್ಲಿ ತಾಪಮಾನ 0.5 ರಿಂದ 2.5 ಡಿಗ್ರಿ ಸೆಲ್ಸಿಯಸ್ ಗೆ ಬದಲಾಗುತ್ತದೆ. ಇದರಿಂದ ಮಳೆ ಕೂಡ ಹೆಚ್ಚಾಗಲಿದ್ದು, ರಾಬಿ ಹಾಗೂ ಖಾರೀಫ್ ಬೆಳೆಗಳ ಮೇಲೆ ಪರಿಣಾಮ ಬೀರಲಿದೆ ಎಂದರು.
ಹವಾಮಾನ ವೈಪರೀತ್ಯದ ಪರಿಣಾಮ, ಮೌಲ್ಯಮಾಪನ ಸೇರಿದಂತೆ ಇತರೆ ಪರಿಹಾರ ಕ್ರಮಗಳನ್ನು ಪಂಚಾಯತ್ ಮಟ್ಟದಿಂದ ರೂಪಿಸಬೇಕು ಎಂದು ವಿಶ್ವಸಂಸ್ಥೆ ಸಮಿತಿ ಸದಸ್ಯರಾದ ಡಾ. ಎಚ್. ಎನ್. ರವೀಂದ್ರ ನಾಥ್ ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿಸಿದರು.
ಈಗಾಗಲೇ ವಿಶ್ವ ಬ್ಯಾಂಕ್ ಹವಾಮಾನ ವೈಪರೀತ್ಯ ಹಾಗೂ ಇತರೆ ಪರಿಸರ ಕಾಳಜಿ ಹೊಂದಿರುವ ಯೋಜನೆಗಳಿಗೆ ಹಣ ನೀಡುವುದಾಗಿ ತಿಳಿಸಿದ್ದು, ಅಂತಹ ಯೋಜನೆಗಳನ್ನು ಸಿದ್ಧಪಡಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದರು.
ರಾಜ್ಯದ 94 ದ್ವೀಪಗಳು ಹಾಗೂ ಕರಾವಳಿ ಪ್ರದೇಶಗಳಲ್ಲಿ ಈಗಾಗಲೇ ಮಣ್ಣಿನ ಸವೆತ ಅನುಭವಿಸುತ್ತಿದೆ. ಉತ್ತರ ಕರ್ನಾಟಕ ಹಾಗೂ ಒಣ ಪ್ರದೇಶಗಳಲ್ಲಿ ಈ ಬಾರಿ ಹೆಚ್ಚು ಮಳೆಯಾಗುತ್ತಿದೆ ಎಂದು ವರದಿ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ