247.91 ಕೋಟಿ ರೂ. ಕ್ರಿಯಾ ಯೋಜನೆಗೆ ಹೆಚ್.ಕೆ.ಆರ್.ಡಿ.ಬಿ. ಜಿಲ್ಲಾ ಸಲಹಾ ಸಮಿತಿ ಅನುಮೋದನೆ

ಮಂಗಳವಾರ, 6 ನವೆಂಬರ್ 2018 (14:00 IST)
ಕಲಬುರಗಿ ಜಿಲ್ಲೆಗೆ 2018-19ನೇ ಸಾಲಿನಲ್ಲಿ ಹೈದ್ರಾಬಾದ ಕರ್ನಾಟಕದ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಮೈಕ್ರೋ ಮತ್ತು ಮ್ಯಾಕ್ರೋ ನಿಧಿಯಲ್ಲಿ ಹಂಚಿಕೆ ಮಾಡಲಾದ 247.91 ಕೋಟಿ ರೂ.ಗಳಿಗೆ ಸಿದ್ದಪಡಿಸಲಾದ ಕ್ರಿಯಾ ಯೋಜನೆಗೆ  ಅನುಮೋದನೆ ನೀಡಲಾಗಿದೆ.

ಕಲಬುರಗಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ಹೆಚ್.ಕೆ.ಆರ್.ಡಿ.ಬಿ. ಜಿಲ್ಲಾ ಸಲಹಾ ಸಮಿತಿ ಸಭೆ ಅನುಮೋದನೆ ನೀಡಿತು.

2018-19ನೇ ಸಾಲಿನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಮೈಕ್ರೋ ನಿಧಿಯಡಿ 7797.88 ಲಕ್ಷ ರೂ. ಹಾಗೂ ಮ್ಯಾಕ್ರೋ ನಿಧಿಯಡಿ 3341.78 ಲಕ್ಷ ರೂ. ಮೀಸಲಿರಿಸಲಾಗಿದೆ. ಅದೇ ರೀತಿ ಸಾಂಸ್ಥಿಕ ವಲಯದಡಿ ಸಂಸ್ಥೆಗಳಿಗೆ ನೆರವು ನೀಡಲು ಮೈಕ್ರೋ ಯೋಜನೆಯಡಿ 9555.98 ಲಕ್ಷ ರೂ. ಹಾಗೂ ಮ್ಯಾಕ್ರೋ ಯೋಜನೆಯಡಿ 4095.43 ಲಕ್ಷ ರೂ. ವಿನಿಯೋಗಿಸಲಾಗುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಆಯಾ ತಾಲೂಕಿಗೆ ಹಂಚಿಕೆ ಮಾಡಲಾದ ಅನುದಾನಕ್ಕೆ ಸಭೆ ಒಪ್ಪಿಗೆ ಸೂಚಿಸಿತು.
ಸಮಾಜ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಜಿಲ್ಲೆಗೆ ಹಂಚಿಕೆಯಾಗಿರುವ ಅನುದಾನ ಕೇವಲ ನಗರಗಳೀಗೆ ಸೀಮಿತಗೊಳಿಸದೆ ಸಂಪೂರ್ಣ ಜಿಲ್ಲೆಗೆ ಅನುದಾನ ಹಂಚಿಕೆಯಾಗಬೇಕು. ಕಲಬುರಗಿ ಸೇರಿದಂತೆ ಜಿಲ್ಲೆಯ ಪ್ರಮುಖ ನಗರ-ಪಟ್ಟಣ ಪ್ರದೇಶಗಳಲ್ಲಿ ಹಂಚಿಕೆಯಾದ ಅನುದಾನ ಪೈಕಿ ಶೇ.10ರಷ್ಟು ಅನುದಾನ ಪಟ್ಟಣದ ಸೌಂದರ್ಯೀಕರಣಕ್ಕೆ ಬಳಸಿಕೊಳ್ಳಬೇಕು. ಸಾಂಸ್ಥಿಕ ವಲಯದಲ್ಲಿ ಉಪಪಕರಣಗಳ ಖರೀದಿಯಂತಹ ಕಾಮಗಾರಿಗಳಿಗೆ ಅಲ್ಪಾವದಿ ಟೆಂಡರ್ ಕರೆದು ತ್ವರಿತವಾಗಿ ಅನುಷ್ಟಾನಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿರುವ ಸಿಮೆಂಟ್ ಕಂಪನಿಗಳು ತಮ್ಮ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ನಿರ್ವಹಿಸಬೇಕಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸಿಮೆಂಟ್ ಕಂಪನಿಗಳ ನೆರವು ಪಡೆಯಬೇಕು. ಅಲ್ಲದೆ ಪಿಪಿಪಿ ಮಾದರಿಯ ಯೋಜನೆಗಳನ್ನು ಸಹ ಪ್ರಾಯೋಜನೆ ಮಾಡಿಕೊಳ್ಳಬೇಕು. ಕಲಬುರಗಿ ನಗರದಲ್ಲಿ ಸಂಚಾರ ಚಲನಶೀಲತೆ ಉತ್ತಮಗೊಳಿಸಲು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮಹಾನಗರ ಪಾಲಿಕೆಯ ಸಹಕಾರದೊಂದಿಗೆ ಹೆಚ್.ಕೆ.ಆರ್.ಡಿ.ಬಿ. ಅನುದಾನ ಬಳಸಿಕೊಳ್ಳಬೇಕು  ಎಂದ ಸಚಿವರು ಹೆಚ್.ಕೆ.ಆರ್.ಡಿ.ಬಿ. ಕಾಮಗಾರಿಗಳು ಕೈಗೆತ್ತಿಕೊಳ್ಳುವ ಮುನ್ನ ಸಂಬಂಧಿಸಿದ ಶಾಸಕರ ಗಮನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ