ಉತ್ತರ ಕರ್ನಾಟಕ ಭಾಗದಲ್ಲಿ 30ರಿಂದ 40 ಸ್ಥಾನ ನಿಶ್ಚಿತ : ಕುಮಾರಸ್ವಾಮಿ
ಶುಕ್ರವಾರ, 14 ಏಪ್ರಿಲ್ 2023 (12:54 IST)
ಕಲಬುರಗಿ : ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪಕ್ಷ ಸುಮಾರು 30 ರಿಂದ 40 ಸ್ಥಾನಗಳನ್ನು ಪಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ಖಾಸಗಿ ಹೊಟೇಲ್ನಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಬಹಳಷ್ಟು ಜನ ಜನತಾ ಪರಿವಾರದಿಂದ ಬೇರೆ ಬೇರೆ ಪಕ್ಷಕ್ಕೆ ಹೋಗಿದ್ದು, ಇಂದು ಅವರೆಲ್ಲರೂ ಮರಳಿ ವಾಪಸ್ ಬರಲು ಚರ್ಚೆ ನಡೆಸಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಪಕ್ಷ ಇಲ್ಲವೆಂದು ಲೇವಡಿ ಮಾಡುತ್ತಿದ್ದರು. ಆದರೆ ಈಗ ಉತ್ತರ ಕರ್ನಾಟಕದ ಭಾಗದಲ್ಲಿ ಜೆಡಿಎಸ್ ಪರವಾದ ವಾತಾವರಣ ನಿರ್ಮಾಣವಾಗಿದೆ ಎಂದರು.
ವೈ.ಎಸ್.ವಿ ದತ್ತಾ ಅವರು ನನ್ನ ಜೊತೆಗೆ ಸಂಪರ್ಕದಲ್ಲಿಲ್ಲ. ಅವರು ಶಾಸಕರಿದ್ದಾಗಲೂ ನನ್ನ ಜೊತೆ ಸಂಪರ್ಕದಲ್ಲಿ ಇರಲಿಲ್ಲ. ನಾಳೆ ಬೆಳಗ್ಗೆ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತೇನೆ. ಪಟ್ಟಿ ಬಿಡುಗಡೆ ಮಾಡಲು ಮಾನಸಿಕವಾಗಿ ಸಂಪೂರ್ಣ ಸಿದ್ಧನಾಗಿದ್ದೇನೆ ಎಂದು ಹೇಳಿದರು.