ಚಿಕ್ಕಮಗಳೂರು: ಕೊಪ್ಪ ತಾಲೂಕಿನ ಖಾಸಗಿ ಶಾಲೆಯ ಹಾಸ್ಟೆಲ್ನಲ್ಲಿ ಆ.22 ರಂದು ಆತ್ಮಹತ್ಯೆಗೆ ಶರಣಾಗಿದ್ದ 9ನೇ ತರಗತಿ ವಿದ್ಯಾರ್ಥಿಯ ಸಾವಿನ ಸತ್ಯ ಹೊರಬಿದ್ದಿದೆ.
9ನೇ ತಗರತಿ ವ್ಯಾಸಂಗ ಮಾಡುತ್ತಿದ್ದ ಶ್ರೀನಿವಾಸ್ (15) ಸಾವಿಗೆ 750 ರೂಪಾಯಿ ಸಾಲವೇ ಕಾರಣವಾಗಿದೆ. ತನ್ನ ಸಾವಿಗೆ ಕಾರಣವನ್ನು ಬರೆದಿಟ್ಟಿರುವ ವಿದ್ಯಾರ್ಥಿ 750 ರೂಪಾಯಿಗೆ ಆಂಟಿ 3000 ರೂ. ಕೇಳಿದ್ದಾರೆ ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ವಿಚಾರ ಈಗ ಬೆಳಕಿಗೆ ಬಂದಿದೆ.
ಆ ಆಂಟಿ ವಾರ್ಡನ್ ಅಥವಾ ಹಾಸ್ಟೆಲ್ನ ಬೇರೆ ಸಿಬ್ಬಂದಿಯೋ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಇದೀಗ ಡೆತ್ ನೋಟ್ ಹೊರಬಂದಿದ್ದು ಆತನ ಸಾವಿಗೆ ಕಾರಣಕರ್ತರಾದವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಮೃತ ಬಾಲಕನ ತಂದೆ ಆಗ್ರಹಿಸಿದ್ದಾರೆ.
ಮೃತ ಬಾಲಕ ಶ್ರೀನಿವಾಸ್ ತಂದೆ ನಿವೃತ್ತ ಯೋಧರಾಗಿದ್ದು, ಸೇನೆಯಿಂದ ವಾಪಸ್ ಬಂದ ಬಳಿಕ ಕೊಪ್ಪದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಸರ್ಕಾರಿ ಸೇವೆ ಸಲ್ಲಿಸುತ್ತಿದ್ದರು. ಕೊಪ್ಪದಿಂದ ಅಜ್ಜಂಪುರ ತಾಲೂಕಿಗೆ ವರ್ಗಾವಣೆಯಾದ ಬಳಿಕ ಮಗನನ್ನು ಖಾಸಗಿ ಶಾಲೆಯ ಹಾಸ್ಟೆಲಿಗೆ ಸೇರಿಸಿ ಬಂದಿದ್ದರು.
ಡೆತ್ ನೋಟ್ ಹೊರ ಬರುತ್ತಿದ್ದಂತೆ ಬಾಲಕನ ಪೋಷಕರು ಹಾಗೂ ಸಂಬಂಧಿಕರು ಕೂಡ ಅವನಿಗೆ ಹಣ ಕೊಟ್ಟವರು ಯಾರು? ಕೊಟ್ಟದ್ದು ಯಾಕೆ ? 750 ರೂ. ನೀಡಿ 3000 ರೂ. ಕೇಳಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.
.