ರಾಜ್ಯ ಚುನಾವಣಾ ಆಯೋಗಕ್ಕೆ ದೂರುಗಳ ಸುರಿಮಳೆ
ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರುಗಳ ಸುರಿಮಳೆ ಬರುತ್ತಿದೆ. ಈಗಾಗಲೇ ಚುನಾವಣೆಯ ದಿನಾಂಕ ನಿಗದಿಯಾಗಿದ್ದು, ಚುನಾವಣಾ ಅಕ್ರಮ ತಡೆಯಲು ನೀತಿ ಸಂಹಿತೆ ಜಾರಿಯಾಗಿದೆ. ಅದರಂತೆ ಇದೀಗ ಪೊಲೀಸರು ಮತ್ತು ಆರ್ಟಿಓ ಅಧಿಕಾರಿಗಳು ಚೆಕ್ಪೋಸ್ಟ್ ನಿರ್ಮಿಸಿ ಬೀಗಿ ಬಂದೋಬಸ್ತ್ ಮಾಡುತ್ತಿದ್ದಾರೆ. ಆದರೀಗ ಅವರ ವಿರುದ್ದ ರಾಜ್ಯ ಸರ್ಕಾರಿ ವಾಹನ ಚಾಲಕರ ಸಂಘವು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಮೇಲೆ ದೈಹಿಕ ದೌರ್ಜನ್ಯದ ಜೊತೆಗೆ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ ಎಂದು ಎಂದು ಕಿಡಿಕಾರಿದ್ದಾರೆ. ಹೌದು ಕಾನೂನಿನ ಪ್ರಕಾರ ಚುನಾವಣಾ ಸಮಯದಲ್ಲಿ ಸರ್ಕಾರಿ ವಾಹನಗಳ ಸದ್ಬಳಕೆ ಆಗಬೇಕು. ಸಂಬಂಧ ಪಟ್ಟ ಇಲಾಖೆಯ ಮುಖ್ಯಸ್ಥರಿಗೆ ಪತ್ರ ಬರೆದು ಆ ಮೂಲಕ ವಾಹನ ಬಳಕೆ ಆಗಬೇಕು. ಅದು ಬಿಟ್ಟು ಏಕಾಏಕಿ ಗೂಂಡಾಗಳ ಹಾಗೇ ನಡು ರಸ್ತೆಯಲ್ಲಿ ವಾಹನಗಳ ವಶ ಪಡಿಸಿಕೊಳ್ಳುತ್ತಿದ್ದಾರೆ ಎಂದು ಚಾಲಕರು ಗರಂ ಆಗಿದ್ದಾರೆ.