ಕಲಬುರಗಿ: ತನ್ನ ಇ ಸ್ಕೂಟರ್ ಅನ್ನು ಸರಿಯಾಗಿ ದುರಸ್ತಿ ಮಾಡಿಲ್ಲವೆಂದು ವ್ಯಕ್ತಿಯೊಬ್ಬ ಓಲಾ ಶೋರೂಂಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.
ಶೋರೂಂ ಮ್ಯಾನೇಜರ್ ನೀಡಿದ ದೂರಿನ ಅನ್ವಯ ನದೀಮ್ ವಿರುದ್ಧ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಮದ್ ನದೀಮ್ ಹಚ್ಚಿದ ಬೆಂಕಿಗೆ ಶೋರೂಂನ ಆರು ಇ ಸ್ಕೂಟರ್ ಸೇರಿ ₹8.15 ಲಕ್ಷ ಮೌಲ್ಯದ ಪೀಠೋಪಕರಣಗಳು ಭಸ್ಮವಾಗಿವೆ.
ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ತಿಂಗಳು ಖರೀದಿಸಿದ್ದ ಇ ಸ್ಕೂಟರ್‌ನ ಬೆಲ್ಟ್‌ನಿಂದ ಶಬ್ದ ಬರುತ್ತಿತ್ತು. ಮೂರು ಬಾರಿ ಹೊಸ ಮೋಟರ್ ಅಳವಡಿಸಿದರು, ಬೆಲ್ಟ್ ಶಬ್ದ ಸರಿಹೋಗಿರಲಿಲ್ಲ. ನದೀಮ್ ಸೆಪ್ಟೆಂಬರ್ 10ರಂದು ಶೋರೂಂಗೆ ಬಂದು ಹೊಸ ವಾಹನ ಕೊಡುವಂತೆ ತಕರಾರು ತೆಗೆದರು. ಇಬ್ಬರು ಸಿಬ್ಬಂದಿ ಚಹಾ ಕುಡಿಯಲು ಹೊರಗೆ ಹೋಗಿದ್ದಾಗ ಮ್ಯಾನೇಜರ್ ಮೇಲೆ ಹಲ್ಲೆ ಮಾಡಿ, ಬಳಿಕ ಇ ಸ್ಕೂಟರ್‌ಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.