ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು
ಮಲೆನಾಡು ಭಾಗದಲ್ಲಿ ಹಿಂಡು ಹಿಂಡಾಗಿ ಗಜಪಡೆ ಓಡಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ದೊಡ್ಡ ದೊಡ್ಡ ಆನೆಗಳ ಜೊತೆಯಲ್ಲಿ ಮರಿಗಳೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಆನೆ ಸಂತತಿ ದಿನದಿಂದ ದಿನಕ್ಕೆ ವೃದ್ಧಿಸುತ್ತಿರುವುದು ಕಂಡು ಬಂದಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೀರಿಹಳ್ಳಿ ಗ್ರಾಮದ ಕಾಫಿ ತೋಟದಲ್ಲಿ ಹತ್ತಾರು ಆನೆ ಬೀಡುಬಿಟ್ಟಿವೆ. ಕಾಫಿ ತೋಟದಲ್ಲೆಲ್ಲಾ ಓಡಾಡಿ ದಾಂಧಲೆ ನಡೆಸಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ. ಈ ನಡುವೆ ಬಿಸಿಲ ಬೇಗೆಯಿಂದ ಕಾಫಿ ತೋಟದಲ್ಲಿರುವ ನೀರಿನ ಹೊಂಡದಲ್ಲಿ ಕಾಡಾನೆ ಮರಿಗಳು ಕೆಲಕಾಲ ಬಿದ್ದು ಈಜಾಡಿದ್ದು, ಕಾಡಾನೆಗಳ ಆಟಾಟೋಪ ಮೊಬೈಲ್‌ನಲ್ಲಿ ಸೆರೆಯಾಗಿದೆ. ಹಿಂಡು ಹಿಂಡಾಗಿ ಗಜಪಡೆ ಕಾಣಿಸಿಕೊಂಡಿರುವುದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಇನ್ನೊಂದೆಡೆ ಮರಿಗಳೇ ಹೆಚ್ಚಾಗಿರುವುದರಿಂದ ಅಕಸ್ಮಾತ್ ಕೆಣಕಿದರೆ ದೊಡ್ಡ ಆನೆಗಳು ಜನರ ಮೇಲೆ ದಾಳಿ ಮಾಡುವ ಸಾಧ್ಯತೆಯಿದ್ದು, ಜೀವಭಯದಿಂದ ಕಾಫಿ ತೋಟದ ಕೆಲಸಕ್ಕೆ ಬರಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಕಾಡಾನೆಗಳನ್ನು ಓಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.