ಕಾನೂನು ಪ್ರಕ್ರಿಯೆ ಮುಗಿದರೆ ಇಂದೇ ತೆಲಗಿ ಮರಣೋತ್ತರ ಪರೀಕ್ಷೆ
ಶುಕ್ರವಾರ, 27 ಅಕ್ಟೋಬರ್ 2017 (08:19 IST)
ಬೆಂಗಳೂರು: ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ಲಾಲ್ ತೆಲಗಿ(56) ನಿನ್ನೆ ಸಂಜೆ(ಅ.26) ಮೃತಪಟ್ಟಿದ್ದಾನೆ.
ಅಧಿಕ ರಕ್ತದೊತ್ತಡ, ಮೆದುಳು ಜ್ವರ, ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ತೆಲಗಿ, 13 ದಿನದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಕಳೆದ ಮೂರುದಿನದಿಂದ ಐಸಿಯು ನಲ್ಲಿ ವೆಂಟಿಲೇಟರ್ ಮೂಲಕ ನೀಡುತ್ತಿದ್ದ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮಧ್ಯಾಹ್ನ 3:55ರ ಸುಮಾರಿಗೆ ಮೃತಪಟ್ಟಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.
ಚಿಕಿತ್ಸೆ ಫಲಿಸದೆ ತೆಲಗಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ಆಸ್ಪತ್ರೆಗೆ ತೆರಳಿ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಇಂದು ಮರಣೋತ್ತರ ಪರೀಕ್ಷೆ ನಡೆಯುವ ಸಾಧ್ಯತೆ ಇದೆ. ಬಳಿಕ ಇಂದೇ ಆತನ ಪತ್ನಿ, ಮಗಳು ಸನಾ ಸೇರಿದಂತೆ ಸಂಬಂಧಿಕರ ವಶಕ್ಕೆ ಮೃತದೇಹವನ್ನು ವೈದ್ಯರು ಹಸ್ತಾಂತರಿಸಲಿದ್ದಾರೆ. ಬೆಳಗಾವಿಯ ಖಾನಾಪುರದಲ್ಲಿ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತೆಲಗಿ ಕುಟುಂಬ ಮೂಲಗಳು ತಿಳಿಸಿವೆ.