ಫೆಬ್ರವರಿ ಅಂತ್ಯದ ವೇಳೆಗೆ ಬಂಡವಾಳ ವೆಚ್ಚ ಮಾಡಲು ಕ್ರಮ : ಸಿಎಂ ಸಿದ್ದರಾಮಯ್ಯ ಸೂಚನೆ

ಮಂಗಳವಾರ, 5 ಸೆಪ್ಟಂಬರ್ 2023 (07:27 IST)
ಬೆಂಗಳೂರು : ಪ್ರಸಕ್ತ ಆಯವ್ಯಯದಲ್ಲಿ ಬಂಡವಾಳ ಮೇಲಣ ವೆಚ್ಚಕ್ಕಾಗಿ 54,374 ಕೋಟಿ ರೂ. ಹಂಚಿಕೆಯಾಗಿದ್ದು, ವಿವಿಧ ಇಲಾಖೆಗಳಿಗೆ ಹಂಚಿಕೆಯಾಗಿರುವ ಅನುದಾನವನ್ನು ಫೆಬ್ರವರಿ ಒಳಗೆ ವೆಚ್ಚ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ.

ಸೋಮವಾರ ಅವರು ವಿವಿಧ ಇಲಾಖೆಗಳ ಬಂಡವಾಳ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಇಂದಿನ ಸಭೆಯಲ್ಲಿ ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಯೋಜನಾ ಇಲಾಖೆ (ಕಲ್ಯಾಣ ಕರ್ನಾಟಕ ಪ್ರದೇಶಾಭಿವೃಧಿ ಮಂಡಳಿ), ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಸಣ್ಣ ನೀರಾವರಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಕಳೆದ ವರ್ಷದ ಆಯವ್ಯಯದಲ್ಲಿ ಬಂಡವಾಳ ಮೇಲಣ ವೆಚ್ಚಕ್ಕೆ 46,955 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಪ್ರಸಕ್ತ ವರ್ಷದಲ್ಲಿ 54,374 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ಇದು ಸರ್ಕಾರದ ಆಸ್ತಿ ಸೃಜನೆಗೂ ಪೂರಕವಾಗಿರುವುದರಿಂದ ಈ ಅನುದಾನ ಸದ್ಬಳಕೆಯಾಗುವುದನ್ನು ಖಾತರಿಪಡಿಸಿಕೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಚುನಾವಣೆ ಹಾಗೂ ಆಯವ್ಯಯ ಅನುಮೋದನೆ ವಿಳಂಬವಾದ ಕಾರಣ ಒಟ್ಟಾರೆ ಪ್ರಗತಿಯಲ್ಲಿ ಹಿನ್ನಡೆಯಾಗಿದೆ. ಆದರೆ ಶೀಘ್ರವೇ ನಿಗದಿತ ಗುರಿಯಂತೆ ವೆಚ್ಚ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮೀಣ ರಸ್ತೆಗಳ ಯೋಜನೆಯಡಿ ಹೆಚ್ಚಿನ ಪ್ರಗತಿ ಸಾಧಿಸಲು ಸೂಚಿಸಿದ ಮುಖ್ಯಮಂತ್ರಿಗಳು, ಕೆಕೆಆರ್ಡಿಬಿ ಯಡಿ ಕಳೆದ ವರ್ಷದ 2,000 ಕೋಟಿ ರೂ. ಗಳಿಗೂ ಹೆಚ್ಚು ಅನುದಾನ ಲಭ್ಯವಿದ್ದು, ಪ್ರಸಕ್ತ ಸಾಲಿನಲ್ಲಿ 3,000 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಆದ್ದರಿಂದ ಶೀಘ್ರವೇ ಕ್ರಿಯಾ ಯೋಜನೆ ಅನುಮೋದನೆ ಪಡೆದು ಕಾಮಗಾರಿ ಅನುಷ್ಠಾನಗೊಳಿಸುವಂತೆ ಸೂಚಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ