ಹೈಕೋರ್ಟ್ ಪೀಠದಲ್ಲಿ ಹೈಕೋರ್ಟ್ ವಕೀಲರ ಸಂಘದಿಂದ ಭಾರತದ ಪ್ರಥಮ ರಾಷ್ಟ್ರಾಧ್ಯಕ್ಷ ಡಾ. ರಾಜೇಂದ್ರ ಪ್ರಸಾದ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ವಕೀಲರ ದಿನಾಚರಣೆಯನ್ನಾಗಿ ಆಚರಿಸಲಾಯಿತು.
ಕಲಬುರಗಿ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಅರವಿಂದ ಕುಮಾರ ಮಾತನಾಡಿ, ವಕೀಲರೆಂದರೆ ಸಾಮಾಜಿಕ ರೋಗಗಳನ್ನು ಹೋಗಲಾಡಿಸುವ ವೈದ್ಯರಿದ್ದಂತೆ. ವಕೀಲ ವೃತ್ತಿ ಅತ್ಯಂತ ಮಹತ್ವದ ವೃತ್ತಿಯಾಗಿದ್ದು, ಇದನ್ನು ಸರಿಯಾಗಿ ನಿಭಾಯಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು. ನಾನು ಸಹ ವಕೀಲರ ಸಂಘದ ಸದಸ್ಯನಾಗಿ ವಕೀಲ ವೃತ್ತಿ ಮಾಡಿ ತದನಂತರ ನ್ಯಾಯಧೀಶನಾಗಿದ್ದು, ವಕೀಲರ ಸಂಘ ನನಗೆ ತವರು ಮನೆ ಇದ್ದಂತೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ನ್ಯಾ. ಜಾನ್ ಮೈಕಲ್ ಕುನ್ಹಾ, ನ್ಯಾ. ಎಚ್. ಟಿ. ನರೇಂದ್ರ, ನ್ಯಾ. ಪಿ.ಜಿ.ಎಂ. ಪಾಟೀಲ್ ಅವರು ಸಹ ಡಾ. ರಾಜೆಂದ್ರಪ್ರಸಾದ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಗೌರವ ಸಲ್ಲಿಸಿದರು. ಗುಲಬರ್ಗಾ ವಕೀಲರ ಸಂಘದ ಹೈಕೋರ್ಟ್ ಘಟಕದ ಉಪಾಧ್ಯಕ್ಷ ಎಸ್. ಜಿ. ಮಠ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಗೋಪಾಲ ಬಿ. ಯಾದವ ವಂದಿಸಿದರು.