ನಾಲ್ವರು ವಿದ್ಯಾರ್ಥಿಗಳ ಮೃತಪಟ್ಟ ಬೆನ್ನಲ್ಲೇ ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ

Sampriya

ಬುಧವಾರ, 11 ಡಿಸೆಂಬರ್ 2024 (19:51 IST)
ಕಾರವಾರ: ಪ್ರವಾಸಕ್ಕೆಂದು ಬಂದಿದ್ದ ನಾಲ್ವರು ವಿದ್ಯಾರ್ಥಿನಿಯರು ನೀರುಪಾಲಾಗಿ ಮೃತಪಟ್ಟ ಬೆನ್ನಲ್ಲೇ ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.

ಮಂಗಳವಾರ ಶಾಲಾ ಮಕ್ಕಳು ಪ್ರವಾಸಕ್ಕೆಂದು ಮುರುಡೇಶ್ವರ ಕಡಲ ತೀರಕ್ಕೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊತ್ತೂರು ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಪ್ರವಾಸಕ್ಕೆ ಹೋಗಿದ್ದರು. ನೋಡ ನೋಡುತ್ತಿದ್ದಂತೆ, ಅಲೆಗಳ ಅಬ್ಬರಕ್ಕೆ ಕೊಚ್ಚಿಕೊಂಡು ಹೋದ ಏಳು ಜನರ ಪೈಕಿ ನಾಲ್ವರು ವಿದ್ಯಾರ್ಥಿನಿಯರು ನೀರು ಪಾಲಾಗಿದ್ದರು.

ನಿನ್ನೆ ಒಬ್ಬರ ಮತ್ತು ಇಂದು ಮೂವರ ವಿದ್ಯಾರ್ಥಿನಿಯರ ಮೃತದೇಹಗಳು ಪತ್ತೆ ಆಗಿವೆ. ಸದ್ಯ ಈ ಪ್ರಕರಣದಿಂದಾಗಿ ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಮಂಗಳವಾರ ಸಂಜೆ ಸುಮಾರು 54 ವಿದ್ಯಾರ್ಥಿನಿಯರು ಮುರುಡೇಶ್ವರ ಕಡಲ ತೀರದಲ್ಲಿ ಆಟವಾಡಲು ಇಳಿದಿದ್ದರು. ಶಿಕ್ಷಕರು ಮುನ್ನೆಚ್ಚರಿಕೆ ವಹಿಸದೆ ಸಮುದ್ರದಲ್ಲಿ ಮಕ್ಕಳನ್ನು ಆಟವಾಡಲು ಬಿಟ್ಟಿದ್ದರು. ಇದರಿಂದಾಗಿ ಅಲೆಗಳ ಹೊಡೆತಕ್ಕೆ ಸಿಲುಕಿ 7 ವಿದ್ಯಾರ್ಥಿನಿಯರು ಹಾಗೂ ಓರ್ವ ಶಿಕ್ಷಕ ನೀರು ಪಾಲಾಗಿದ್ದರು.

ತಕ್ಷಣೇ ಸ್ಥಳದಲ್ಲಿದ್ದ ಸ್ಥಳೀಯರು ಯಾವುದೇ ಲೈಫ್‌ಗಾರ್ಡ್‌ ಮತ್ತು ಪರಿಕರಗಳು ಇಲ್ಲದೇ ಮೂವರು ವಿದ್ಯಾರ್ಥಿನಿಯರು ಮತ್ತು ಓರ್ವ ಶಿಕ್ಷಕನ ರಕ್ಷಿಸಿದ್ದಾರೆ. ಆದರೆ ಇನ್ನುಳಿದ ಮೂವರು ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದಾರೆ.

ಮೃತರಾದ ಶ್ರಾವಂತಿ, ದೀಕ್ಷಾ, ಲಾವಣ್ಯ ಮತ್ತು ವಂದನ ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ಕೊತ್ತೂರು ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರು. ಜಿಲ್ಲಾಡಳಿತದಿಂದ ಅಂತಿಮ‌ ನಮನದ ನಂತರ ಮೃತ ದೇಹಗಳು ತಮ್ಮ ಗ್ರಾಮಗಳಿಗೆ ತೆರಳಲಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ