ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈಗ ಒಂದೇ ದಿನ ಮಳೆ, ಬಿಸಿಲು, ಚಳಿ ಮೂರೂ ಕಾಲವೂ ಕಂಡುಬರುತ್ತಿದೆ. ಹೀಗಾಗಿ ಜನರಿಗೆ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ.
ಕಳೆದ ಎರಡು ವಾರಗಳಿಂದ ಬೆಂಗಳೂರಿನಲ್ಲಿ ಶೀತ ಸಂಬಂಧೀ ಖಾಯಿಲೆಗಳು ಹೆಚ್ಚಾಗಿವೆ. ಜೊತೆಗೆ ಹಿಂದಿನ ವಾರ ಭಾರೀ ಮಳೆಯಾಗಿ ಈಗ ಸ್ವಲ್ಪ ಮಳೆ ಬಿಡುವು ನೀಡಿರುವುದರಿಂದ ಸೊಳ್ಳೆಗಳ ಕಾಟದಿಂದ ಡೆಂಗ್ಯೂ ಜ್ವರದ ಭೀತಿ ಶುರುವಾಗಿದೆ.
ವಿಶೇಷವಾಗಿ ಮಕ್ಕಳಲ್ಲಿ ಶೀ, ಕೆಮ್ಮು, ಗಂಟಲು ನೋವು, ವೈರಸ್ ಜ್ವರ, ಉಸಿರಾಟದ ತೊಂದರೆ ಕಂಡುಬರುತ್ತಿದೆ. ಜೊತೆಗೆ ಅಲ್ಲಲ್ಲಿ ಡೆಂಗ್ಯೂ ಜ್ವರವೂ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯವಾಗಿದೆ.
ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆಯಿರಲಿ
ವಾತಾವರಣದ ವೈಪರೀತ್ಯದಿಂದ ಬರುವ ಖಾಯಿಲೆಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕೈಗೊಳ್ಳುವುದು ಸೂಕ್ತ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಬಿಸಿ ನೀರು ಆಗಾಗ ಸೇವನೆ ಮಾಡುವುದು, ಬಿಸಿ ನೀರಿನಲ್ಲಿ ದಿನಕ್ಕೊಮ್ಮೆಯಾದರೂ ಬಾಯಿ ಮುಕ್ಕಳಿಸುವುದು, ಬಿಸಿಯಾದ ಆಹಾರ ಸೇವನೆ ಮಾಡುವುದು ಉತ್ತಮ. ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಸೂಪ್ ನಂತಹ ಆಹಾರವನ್ನು ಹೆಚ್ಚು ಹೆಚ್ಚು ತೆಗೆದುಕೊಳ್ಳಿ. ಶೀತದ ಲಕ್ಷಣಗಳಿದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ.