ಗಾಂಧಿ ಜಯಂತಿ ದಿನದಂದು ನೂತನ `ವಿಜಯನಗರ' ಜಿಲ್ಲೆ ಉದ್ಘಾಟನೆ : ಆನಂದ್ ಸಿಂಗ್
ಶುಕ್ರವಾರ, 17 ಸೆಪ್ಟಂಬರ್ 2021 (12:15 IST)
ಹೊಸಪೇಟೆ : ರಾಷ್ಟ್ರಪೀತ ಮಹಾತ್ಮಾ ಗಾಂಧೀಜಿಯ ಜನ್ಮದಿನವಾದ ಅಕ್ಟೋಬರ್ 2 ರಂದು ನೂತನ ವಿಜಯನಗರ ಜಿಲ್ಲೆಯ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆನಂದ್ ಸಿಂಗ್ ಮಹಾತ್ಮಗಾಂಧೀಜಿಯ ಜನ್ಮದಿನವಾದ ಅಕ್ಟೋಬರ್ 2ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೂತನ ವಿಜಯನಗರ ಜಿಲ್ಲೆಯ ಉದ್ಘಾಟನೆ ನೆರವೇರಿಸಲಿದ್ದಾರೆ. ಅ. 2, 3ರಂದು ಎರಡು ದಿನ ಕಾರ್ಯಕ್ರಮ ಆಚರಿಸಲಾಗುವುದು. ವಿಜಯನಗರ ರಚನೆಗೆ ಕಾರಣರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಅನೇಕ ಹಾಲಿ, ಮಾಜಿ ಶಾಸಕ, ಸಚಿವರನ್ನು ಆಹ್ವಾನಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ 2ರ ನಂತರ ಜಿಲ್ಲೆ ಕಟ್ಟುವ ಪ್ರಕ್ರಿಯೆ ಚುರುಕುಗೊಳ್ಳಲಿದೆ. ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಪ್ರಮುಖ ಕಚೇರಿಗಳನ್ನು ಆರಂಭಿಸಲಾಗುವುದು. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ವೇಗ ಕೊಡಲಾಗುವುದು ಎಂದು ಹೇಳಿದ್ದಾರೆ.