ಕುವೆಂಪು ಸಾಲು ಬದಲಾಯಿಸಿದ ಬಳಿಕ ಈಗ ಹಿಂದೂ ವಿರೋಧಿ ಬರಹ: ಕಾಂಗ್ರೆಸ್ ಸರ್ಕಾರದ ವಿರುದ್ಧ ಕೆಂಗಣ್ಣು

Krishnaveni K

ಸೋಮವಾರ, 15 ಏಪ್ರಿಲ್ 2024 (13:42 IST)
Photo Courtesy: Instagram, ಸಾಂದರ್ಭಿಕ ಚಿತ್ರ
ಬೆಂಗಳೂರು: ಕೆಲವು ದಿನಗಳ ಹಿಂದೆ ವಸತಿ ಶಾಲೆಯಲ್ಲಿ ಕುವೆಂಪು ಸಾಲುಗಳನ್ನು ಬದಲಾಯಿಸಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿವಾದಕ್ಕೀಡಾಗಿತ್ತು. ಈಗ ಗ್ರಂಥಾಲಯವೊಂದರಲ್ಲಿ ಹಿಂದೂ ವಿರೋಧಿ ಬರಹ ಬರೆದು ಕೆಂಗಣ್ಣಿಗೆ ಗುರಿಯಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಂಥಾಲಯವೊಂದರಲ್ಲಿ ‘ಮಂದಿರ ಕಟ್ಟಿಸಿದರೆ ಸಾವಿರ ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ’ ಎಂದು ವಿವಾದಾತ್ಮಕ ಸಾಲುಗಳನ್ನು ಬರೆಸಲಾಗಿದೆ. ‘ಒಂದು ಮಂದಿರ ಕಟ್ಟಿಸಿದರೆ ಸಾವಿರ ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ, ಒಂದು ಗ್ರಂಥಾಲಯ ಕಟ್ಟಿಸಿದರೆ ಲಕ್ಷಾಂತರ ವಿಧ್ವಾಂಸರು ಹುಟ್ಟಿಕೊಳ್ಳುತ್ತಾರೆ’ ಎಂಬ ಅಡಿಬರಹ ಬರೆಸಲಾಗಿದೆ.

ಈ ಗೋಡೆ ಬರಹ ಈಗ ವಿವಾದಕ್ಕೆ ಕಾರಣವಾಗಿದೆ. ಈಗಾಗಲೇ ಹಿಂದೂ ಸಂಘಟನೆಗಳು ಇದರ ಬಗ್ಗೆ ಆಕ್ಷೇಪವೆತ್ತಿವೆ. ಮಂದಿರ ಬದಲು ಮಸೀದಿ ಎಂದು ಬರೆಯಬಹುದಿತ್ತಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸುತ್ತಿವೆ. ಈ ಮೊದಲು ಕುವೆಂಪು ಅವರ ಜ್ಞಾನ ದೇಗುಲವಿದು, ಕೈಮುಗಿದು ಒಳಗೆ ಬಾ’ ಎಂಬ ನುಡಿಯನ್ನು ‘ಜ್ಞಾನ ದೆಗುಲವಿದು ಧೈರ್ಯವಾಗಿ ಪ್ರಶ್ನಿಸು’ ಎಂದು ಬರೆದಿದ್ದು ವಿವಾದಕ್ಕೆ ಕಾರಣವಾಗಿತ್ತು.

ಇದೀಗ ಈ ವಿವಾದ ಪ್ರತಿಪಕ್ಷ ಬಿಜೆಪಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ವಿನಾಕಾರಣ ಹಿಂದೂ ವಿರೋಧಿ ಎಂದು ವಿವಾದ ಮೈಮೇಲೆಳೆದುಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ