ಕೋರ್ಟ್ ಹೇಳಿದಷ್ಟೂ ಬಿಡಲು ನೀರಿಲ್ಲ: ಡಿ.ಕೆ.ಶಿವಕುಮಾರ್
ಕಾವೇರಿ ವಿಚಾರದಲ್ಲಿ ತಮಿಳುನಾಡಿಗೆ ನೀರು ಬಿಡಬಾರದು ಎಂದು ಪ್ರತಿಭಟನೆಗಳು ನಡೆಯುತ್ತಿವೆ. ಸುಪ್ರೀಂ ಹೇಳಿದಷ್ಟುನೀರು ಬಿಡಲೂ ಸಹ ನಮಗೆ ಆಗುತ್ತಿಲ್ಲ. ಯಾಕೆಂದರೆ ನಮ್ಮಲ್ಲಿ ನೀರೇ ಲಭ್ಯವಿಲ್ಲ. ಒಟ್ಟಾರೆ ನಾವು ರಾಜ್ಯದ ರೈತರ ಹಿತ ಕಾಯಲು ಬದ್ಧವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಜಲಸಂಪನ್ಮೂಲ ಖಾತೆ ಹೊತ್ತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಸಾಕಷ್ಟು ಒಳಹರಿವು ಬರುತ್ತಿಲ್ಲ. ಸುಪ್ರೀಂ ಕೋರ್ಟ್ ಹೇಳಿದ ಪ್ರಮಾಣದಷ್ಟು ನೀರನ್ನು ಬಿಡಲು ಆಗುತ್ತಿಲ್ಲ. ಮಳೆಯ ನಿರೀಕ್ಷೆಯಲ್ಲಿದ್ದೇವೆ ಆದ್ರೆ ಬೆಂಗಳೂರು, ರಾಮನಗರ ಭಾಗಗಳಲ್ಲಿ ಮಳೆ ಬೀಳುತ್ತಿರುವ ಕಾರಣ ಸ್ವಲ್ಪ ಮಟ್ಟಿಗೆ ಪರಿಸ್ಥಿತಿ ನಿಭಾಯಿಸಲಾಗುತ್ತಿದೆ. ರೈತರ ಬೆಳೆ ಹಾಗೂ ಕುಡಿಯುವ ನೀರಿಗೆ ನಮ್ಮ ಮೊದಲ ಆದ್ಯತೆ ಎಂದು ಹೇಳಿದ್ದಾರೆ.