ಜೈಶ್ರೀರಾಮ್ ಎಂದಿದ್ದಕ್ಕೆ ಹಲ್ಲೆ: ಬಂಧಿತ ಆರೋಪಿಗಳು ಹೇಳಿದ್ದೇ ಬೇರೆ

Krishnaveni K

ಗುರುವಾರ, 18 ಏಪ್ರಿಲ್ 2024 (11:37 IST)
ಬೆಂಗಳೂರು: ರಾಮನವಮಿ ಆಚರಿಸಿಕೊಂಡು ಕಾರಿನಲ್ಲಿ ತೆರಳುತ್ತಿದ್ದ ಯುವಕರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದ ಅನ್ಯ ಕೋಮಿನ ಯುವಕರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಈ ವೇಳೆ ಯುವಕರು ಹಲ್ಲೆ ನಡೆಸಿದ್ದರ ಬಗ್ಗೆ ವಿವರಣೆ ನೀಡಿದ್ದಾರೆ.

ನಿನ್ನೆ ಕಾರಿನಲ್ಲಿ ತೆರಳುತ್ತಿದ್ದ ಯುವಕರನ್ನು ಅಡ್ಡಗಟ್ಟಿದ ಪುಂಡರು ಜೈಶ್ರೀರಾಮ್ ಅಲ್ಲ, ಓನ್ಲೀ ಅಲ್ಲಾಹು ಅಕ್ಬರ್ ಎನ್ನಬೇಕು ಎಂದಿದ್ದರು. ಈ ವಿಚಾರವಾಗಿ ಎರಡೂ ಗುಂಪಿನ ನಡುವೆ ಮಾತಿನ ಚಕಮಕಿಯಾಗಿತ್ತು. ಬಳಿಕ ಕಾರಿನಲ್ಲಿದ್ದ ಯುವಕರ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದರು.

ಘಟನೆ ಬಗ್ಗೆ ಹಲ್ಲೆಗೊಳಗಾದ ಯುವಕರು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಆರೋಪಿಗಳನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಹಲ್ಲೆ ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ ಎಂದಿದ್ದಾರೆ.  ಮಧ‍್ಯಾಹ್ನ 3 ಗಂಟೆಗೆ ನಾವು ಬೈಕ್ ನಲ್ಲಿ ತೆರಳುತ್ತಿದ್ದೆವು. ಎಂಎಸ್ ಪಾಳ್ಯ ಬಳಿ ಟ್ರಾಫಿಕ್ ಜಾಮ್ ಆಗಿತ್ತು. ಕಾರಿನಲ್ಲಿ ಬರುತ್ತಿದ್ದವರು ನಮ್ಮ ಬಳಿ ಕಾರು ನಿಲ್ಲಿಸಿ ಜೋರಾಗಿ ಜೈಶ್ರೀರಾಮ್ ಎಂದು ಕೂಗಿದರು. ಜೊತೆಗೆ ನಮಗೂ ಜೈ ಶ್ರೀರಾಮ್ ಎನ್ನಿ ಎಂದರು. ಅದಕ್ಕೆ ನಾವು ನೀವೇ ಅಲ್ಲಾಹು ಅಕ್ಬರ್ ಎನ್ನಿ ಎಂದು ಕೂಗಿದೆವು. ಆಗ ನಮ್ಮ ನಡುವೆ ಮಾತಿನ ಚಕಮಕಿ ನಡೆಯಿತು. ಸ್ವಲ್ಪ ಹೊಡೆದಾಟ ಆಯಿತು ಅಷ್ಟೇ ಸಾರ್ ಎಂದಿದ್ದಾರೆ.

ಆರೋಪಿಗಳಿಬ್ಬರನ್ನೂ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಇಬ್ಬರೂ ಮದ್ಯ ಸೇವಿಸಿರುವುದು ಪತ್ತೆಯಾಗಿದೆ. ಇಬ್ಬರ ಮೇಲೂ ಹಳೆಯ ಕೇಸ್ ಯಾವುದೂ ಇಲ್ಲ. ಸದ್ಯಕ್ಕೆ ಘಟನಾ ಸ್ಥಳದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ