ಎಸ್ ಐಟಿ ಅಂದರೆ ಸಿದ್ದರಾಮಯ್ಯ ಇನ್ ವೆಸ್ಟಿಗೇಷನ್ ಟೀಂ: ಬಿ ವೈ ವಿಜಯೇಂದ್ರ ಟೀಕೆ

Krishnaveni K

ಬುಧವಾರ, 17 ಜುಲೈ 2024 (20:15 IST)
ಬೆಂಗಳೂರು: ಮಾನ್ಯ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಹಗರಣಗಳ ಸರಮಾಲೆಯಲ್ಲಿ ಸಿಲುಕಿ ಹಾಕಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು.

ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ಹಗರಣಗಳ ವಿರುದ್ಧ ಬಿಜೆಪಿ ಸದನದ ಹೊರಗೆ ಮತ್ತು ಒಳಗಡೆ ಹೋರಾಟ ಮಾಡುತ್ತಿದೆ ಎಂದು ವಿವರಿಸಿದರು. ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸಲಿಟ್ಟ ಹಣವನ್ನು ಲೂಟಿ ಹೊಡೆದು ಲೋಕಸಭಾ ಚುನಾವಣೆಯಲ್ಲಿ ಬಳಸಿಕೊಂಡ ಮಾಹಿತಿ ಕುರಿತು ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೇವೆ. 14 ತಿಂಗಳ ಅವಧಿಯಲ್ಲಿ ಈ ಸರಕಾರ ಮೊದಲ ಬಾರಿಗೆ ಗಂಡಾಂತರಕ್ಕೆ ಸಿಲುಕಿ ಹಾಕಿಕೊಂಡಿದೆ ಎಂದು ನುಡಿದರು.

ಕಳೆದ ಬಾರಿ ಸಿದ್ದರಾಮಯ್ಯನವರು 5 ವರ್ಷಗಳನ್ನು ಯಾವುದೇ ಸಮಸ್ಯೆ ಇಲ್ಲದೆ ಪೂರ್ಣಗೊಳಿಸಿದ್ದರು. ಈ ಬಾರಿ ಬ್ರಹ್ಮಾಂಡ ಭ್ರಷ್ಟಾಚಾರಗಳು ನಡೆದಿವೆ. ಒಂದು ಕಡೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮತ್ತೊಂದೆಡೆ ಮೈಸೂರಿನ ಮೂಡ ನಿವೇಶನ ಹಂಚಿಕೆ ಹಗರಣ ಸರಕಾರವನ್ನು ಕಾಡುತ್ತಿದೆ. ಮೂಡ ಹಗರಣದಲ್ಲಿ ಸ್ವತಃ ಮುಖ್ಯಮಂತ್ರಿಗಳ ಕುಟುಂಬವೇ ಭಾಗಿಯಾಗಿದೆ. ಸಿದ್ದರಾಮಯ್ಯನವರ ಸರಕಾರ ಆಡಳಿತಕ್ಕೆ ಬಂದ ಬಳಿಕ ಸಾವಿರಾರು ಕೋಟಿ ಬೆಲೆಬಾಳುವ ನಿವೇಶನಗಳನ್ನು ಖುಷಿ ಬಂದಂತೆ ಹಂಚಿದ್ದಾರೆ ಎಂದು ಟೀಕಿಸಿದರು.

ಮೂಡ ಹಗರಣದಿಂದ ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ಸಾವಿರಾರು ಕೋಟಿ ನಷ್ಟವಾಗಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದಲ್ಲದೆ, ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಆಗ್ರಹ ಮಾಡುತ್ತಿದ್ದೇವೆ ಎಂದು ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಂ ಕುಟುಂಬವೇ ಹಗರಣದಲ್ಲಿ ಭಾಗವಹಿಸಿದ ಕಾರಣ ಯಾವ ಎಸ್‍ಐಟಿಯು ಏನೂ ಮಾಡಲು ಸಾಧ್ಯವಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಮೇ 26ರಂದು ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲಿಂದ 2 ತಿಂಗಳು ಎಸ್‍ಐಟಿ ತನಿಖೆ ಮಾಡುತ್ತಲೇ ಇದೆ. ನಾಗೇಂದ್ರ ಅವರನ್ನು ನೋಟಿಸ್ ಕೊಟ್ಟು ಕರೆಸಿಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದರು ಎಂದು ಆಕ್ಷೇಪಿಸಿದರು.
 
ಸಿದ್ದರಾಮಯ್ಯ ಇನ್‍ವೆಸ್ಟಿಗೇಶನ್ ಟೀಂ

ನಿನ್ನೆ ನಮ್ಮ ಸುರೇಶ್‍ಕುಮಾರ್ ಅವರು ಸಿದ್ದರಾಮಯ್ಯ ಇನ್‍ವೆಸ್ಟಿಗೇಶನ್ ಟೀಂ (ಎಸ್‍ಐಟಿ) ಎಂದು ಕರೆದಿದ್ದಾರೆ. ಅವರಿಗೆ ಖುಷಿ ಬಂದಂತೆ ತನಿಖೆ ನಡೆದರೆ ಯಾವುದೇ ಕಾರಣಕ್ಕೂ ನ್ಯಾಯ ಸಿಗುವುದಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಪರಿಶಿಷ್ಟ ಪಂಗಡಕ್ಕೆ ನ್ಯಾಯ ಸಿಗಲಾರದು. ಮೈಸೂರಿನಲ್ಲಿ 1 ಲಕ್ಷಕ್ಕೂ ಹೆಚ್ಚು ಅರ್ಜಿUಳು ಹಲವು ವರ್ಷಗಳಿಂದ ಬಾಕಿ ಇದ್ದರೂ ಅದನ್ನು ಬಿಟ್ಟು ಮುಖ್ಯಮಂತ್ರಿಗಳ ಕುಟುಂಬಕ್ಕೆ ನಿವೇಶನಗಳನ್ನು ಮಂಜೂರು ಮಾಡಿದ್ದಾರೆ. ಸಿದ್ದರಾಮಯ್ಯನವರು ಸಾಂವಿಧಾನಿಕ ಹುದ್ದೆ, ವಿರೋಧ ಪಕ್ಷದ ನಾಯಕರಾಗಿದ್ದ ವೇಳೆ ಈ ಮಂಜೂರಾತಿ ಸಿಕ್ಕಿದೆ. ಅದನ್ನು ಮರೆಯಬಾರದು ಎಂದು ತಿಳಿಸಿದರು.
 
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ