ಆಂಬ್ಯುಲೆನ್ಸ್ ಗೆ ದಾರಿ ಬಿಡದೇ ದರ್ಪ ತೋರಿದ ಆಟೋ ಚಾಲಕ: ವಿಡಿಯೋ
ಆಂಬ್ಯುಲೆನ್ಸ್ ಬರುತ್ತಿದ್ದರೆ ಯಾವುದೇ ಟ್ರಾಫಿಕ್ ನಲ್ಲಿದ್ದರೂ ದಾರಿ ಬಿಡಬೇಕು ಎಂದು ನಿಯಮವೇ ಇದೆ. ತುರ್ತಾಗಿ ಒಬ್ಬರ ಜೀವ ಉಳಿಸುವ ಕಾರಣಕ್ಕೆ ತೆರಳುವ ಆಂಬ್ಯುಲೆನ್ಸ್ ಗೆ ದಾರಿ ಮಾಡಿಕೊಡುವುದು ಮಾನವೀಯತೆಯ ದೃಷ್ಟಿಯಿಂದಲೂ ನಮ್ಮ ಕರ್ತವ್ಯವಾಗಿದೆ.
ಆದರೆ ಈ ಆಟೋ ಚಾಲಕ ಹಾರ್ನ್ ಸಾಲದೆಂಬಂತೆ ದಾರಿ ಬಿಡುವಂತೆ ಆಂಬ್ಯುಲೆನ್ಸ್ ಚಾಲಕ ವಾಯ್ಸ್ ಸಂದೇಶ ಮಾಡಿದರೂ ಕೇಳದೇ ದರ್ಪ ತೋರಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಬೆಳಂದೂರು ಸಂಚಾರ ಠಾಣೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಕೂಡ್ಲು ನಿವಾಸಿ ಪರಮೇಶ್ ಎನ್ನುವ 49 ವರ್ಷದ ವ್ಯಕ್ತಿ ಬಂಧಿತ. ಈತನನ್ನ ಬಂಧಿಸಿ ದಂಡ ವಿಧಿಸಿ ಬಿಡುಗಡೆ ಮಾಡಲಾಗಿದೆ. ಆಟೋ ನೋಂದಣಿ ಸಂಖ್ಯೆ ಆಧರಿಸಿ ಆತನನ್ನು ವಶಕ್ಕೆ ಪಡೆಯಲಾಗಿತ್ತು. ವಿಚಾರಣೆ ವೇಳೆ ನನಗೆ ಹಿಂದಿನಿಂದ ಆಂಬ್ಯುಲೆನ್ಸ್ ಬರುತ್ತಿದ್ದುದು ಗೊತ್ತಾಗಿರಲಿಲ್ಲ ಎಂದು ಸಮಜಾಯಿಷಿ ನೀಡಿದ್ದಾನೆ.