ಬೆಂಗಳೂರು: ಗಣರಾಜ್ಯೋತ್ಸವ ದಿನಾಚರಣೆ ನಿಮಿತ್ತ ಬೆಂಗಳೂರಿನ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ಪಾರ್ಕಿಂಗ್ ನಿಷೇಧಿಸಲಾಗಿದೆ. ಇಲ್ಲಿದೆ ವಿವರ.
ಜನವರಿ 26 ಅಂದರೆ ನಾಳೆ ಗಣರಾಜ್ಯೋತ್ಸವ ನಿಮಿತ್ತ ನಾಳೆ ಬೆಳಿಗ್ಗೆ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ರಾಜ್ಯಪಾಲರು ಧ್ವಜಾರೋಹಣ ಮಾಡಿ ಗೌರವ ವಂದನೆ ಸ್ವೀಕರಿಸಲಿದ್ದಾರೆ. ಹೀಗಾಗಿ ಕೆಲವು ರಸ್ತೆಗಳಲ್ಲಿ ಸಂಚಾರ ನಿಷೇಧಿಸಲಾಗಿದೆ.
ಬೆಳಿಗ್ಗೆ 8.30 ರಿಂದ 10.30 ರವರೆಗೆ ಸಂಚಾರ, ಪಾರ್ಕಿಂಗ್ ನಿಷೇಧ ಹೇರಲಾಗಿದೆ. ಕಬ್ಬನ್ ರಸ್ತೆಯಲ್ಲಿ ಬಿಆರ್ ವಿ ಜಂಕ್ಷನ್ ನಿಂದ ಕಾಮರಾಜರಸ್ತೆ ಜಂಕ್ಷನ್ ವರೆಗೆ ಎರಡೂ ದಿಕ್ಕುಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಬಗ್ಗೆ ಸಂಚಾರಿ ಪೊಲೀಸರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಯಾವ ರಸ್ತೆಗಳಲ್ಲಿ ನಿರ್ಬಂಧ?
ಇನ್ ಫೆಂಟ್ರಿ ರಸ್ತೆಯಿಂದ ಮಣಿಪಾಲ್ ರಸ್ತೆ: ನೇರವಾಗಿ ಇನ್ ಫೆಂಟ್ರಿ ರಸ್ತೆ-ಸಫೀನಾ ಪ್ಲಾಜಾದಲ್ಲಿ ಎಡತಿರುವು ಪಡೆದು ಮೈನ್ ಗಾರ್ಡ್ ರಸ್ತೆ- ಆಲೀಸ್ ಸರ್ಕಲ್-ಡಿಸ್ಪೆನ್ಸರಿ ರಸ್ತೆ- ಕಾಮರಾಜ ರಸ್ತೆ ಮತ್ತು ಡಿಕನ್ಸನ್ ರಸ್ತೆ ಜಂಕ್ಷನ್ ನಿಂದ ಬಲಕ್ಕೆ ತಿರುವು ಪಡೆದು ಕಾಮರಾಜ ರಸ್ತೆ-ಕಬ್ಬನ್ ರಸ್ತೆ ಮತ್ತು ಕಾಮರಾಜ ರಸ್ತೆ ಜಂಕ್ಷನ್ ನಲ್ಲಿ ಎಡಕ್ಕೆ ತಿರುವು ಪಡೆದು ಕಬ್ಬನ್ ರಸ್ತೆ ಮುಖಾಂತರ ಮಣಿಪಾಲ್ ಸೆಂಟರ್ ಕಡೆಗೆ ಸಾಗಬೇಕು.
ಮಣಿಪಾಲ್ ಸೆಂಟರ್ ಜಂಕ್ಷನ್ ನಿಂದ ಬಿಆರ್ ವಿ ಜಂಕ್ಷನ್ ಕಡೆಗೆ ಬರುವ ವಾಹನಗಳ ಸಂಚಾರವನ್ನು ಮಣಿಪಾಲ್ ಸೆಂಟರ್ ಬಳಿ ನಿರ್ಬಂಧಿಸಲಾಗಿದೆ. ಈ ವಾಹನಗಳು ವೆಬ್ಸ್ ಜಂಕ್ಷನ್ ಬಳಿ ಬಲ ತಿರುವು ಪಡೆದು ಎಂಜಿ ರಸ್ತೆಯ ಮೂಲಕ ಮೆಯೋ ಹಾಲ್, ಕಾವೇರಿ ಎಂಪೋರಿಯಂ, ಅನಿಲ್ ಕುಂಬ್ಳೆ ವೃತ್ತದಲ್ಲಿ ಬಲತಿರುವು ಪಡೆದು ಹೋಗಬೇಕು.
ಅನಿಲ್ ಕುಂಬ್ಳೆ ವೃತ್ತದಿಂದ ಕಬ್ಬನ್ ರಸ್ತೆಗೆ ಹೋಗಬೇಕಾದರೆ ನೇರವಾಗಿ ಸೆಂಟ್ರಲ್ ಸ್ಟ್ರೀಟ್ ನಲ್ಲಿ ಸಾಗಿ, ಬಲಕ್ಕೆ ತಿರುವು ಪಡೆದು ಇನ್ ಫೆಂಟ್ರಿ ರಸ್ತೆ- ಸಫೀನಾ ಪ್ಲಾಜಾದಲ್ಲಿ ಎಡ ತಿರುವು ಪಡೆದು ಮೈನ್ ಗಾರ್ಡ್ ರಸ್ತೆ-ಅಲಿ ಸರ್ಕಲ್-ಡಿಸ್ಪೆನ್ಸರಿ ರಸ್ತೆ-ಕಾಮರಾಜ ರಸ್ತೆ ಮತ್ತು ಡಿಕನ್ಸನ್ ರಸ್ತೆ ಜಂಕ್ಷನ್ ನಲ್ಲಿ ಬಲ ತಿರುವು ಪಡೆದು ಕಾಮರಾಜ ರಸ್ತೆ- ಕಬ್ಬನ್ ರಸ್ತೆ ಮತ್ತು ಕಾಮರಾಜ ರಸ್ತೆ ಜಂಕ್ಷನ್ ನಲ್ಲಿ ಎಡ ತಿರುವು ಪಡೆದು, ಕಬ್ಬನ್ ರಸ್ತೆ ಮುಖಾಂತರ ಮಣಿಪಾಲ್ ಸೆಂಟರ್ ಕಡೆಗೆ ಸಾಗಬೇಕು.
ಇಲ್ಲಿ ಪಾರ್ಕಿಂಗ್ ಗೆ ನಿಷೇಧ
ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿ ನಗರ ಬಸ್ ನಿಲ್ದಾಣದವರೆಗೆ, ಕಬ್ಬನ್ ರಸ್ತೆ, ಸಿಟಿಒ ವೃತ್ತದಿಂದ ಕೆಆರ್ ರಸ್ತೆ ಮತ್ತು ಕಬ್ಬನ್ ಜಂಕ್ಷನ್ ವರೆಗೆ ಮತ್ತು ಎಂಜಿ ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ರಸ್ತೆವರೆಗೆ ಪಾರ್ಕಿಂಗ್ ನಿಷೇಧಿಸಲಾಗಿದೆ.