ರಾಮನಗರ: ಕರ್ನಾಟಕ ವಿಧಾನಸಭೆ ಉಪಚುನಾವಣೆಯಲ್ಲಿ ಹೈವೋಲ್ಟೇಜ್ ಕ್ಷೇತ್ರವಾದ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮೈತ್ರಿ ಅಭ್ಯರ್ಥಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಅವರು " ಅಳೋ ಗಂಡಸನ್ನ ನಂಬಬಾರದು " ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಪ್ರಚಾರ ವೇಳೆ ನಿಖಿಲ್ ಕುಮಾರಸ್ವಾಮಿ ಈ ಹಿಂದಿನ ಚುನಾವಣೆಯ ಸೋಲನ್ನು ನೆನೆದು ಕಾರ್ಯಕರ್ತರ ಮುಂದೆ ಕಣ್ಣೀರು ಹಾಕಿದ್ದರು. "ನಾನು ಮಾಜಿ ಸಿಎಂ ಮಗ ಹಾಗೂ ಮಾಜಿ ಪ್ರಧಾನಿ ಮೊಮ್ಮಗನಾಗಿದ್ದೇ ನನ್ನ ದುರಾದೃಷ್ಟ ಇರಬೇಕೆನೋ? " ಎಂದು ಪ್ರಶ್ನಿಸಿದ್ದರು. ಈ ವೇಳೆ ಕಾರ್ಯಕರ್ತರು ನಿಖಿಲ್ ಅವರನ್ನು ಸಮಾಧಾನ ಮಾಡಿದ್ದರು. ಈ ವಿಚಾರವನ್ನು ಕಾಂಗ್ರೆಸ್ ನಾಯಕರು ಲೇವಡಿ ಮಾಡಿದ್ದರು. ಸದ್ಯ ಸಿಪಿ ಯೋಗೇಶ್ವರ್ ಕೂಡ ನಿಖಿಲ್‌ಗೆ ಪರೋಕ್ಷವಾಗಿ ಲೇವಡಿ ಮಾಡಿದ್ದಾರೆ.
ಕುಮಾರಸ್ವಾಮಿ ಅವರು ಏನೂ ಅಭಿವೃದ್ಧಿ ಮಾಡದೇ ಮಗನನ್ನು ತಂದು ನಿಲ್ಲಿಸಿದ್ದಾರೆ. ಈ ತಾಲ್ಲೂಕಿಗೆ ಯಾಕೆ ಕುಮಾರಸ್ವಾಮಿ ಬಂದ್ರು, ಯಾಕೆ ಬಿಟ್ಟುಹೋದ್ರೋ ಗೊತ್ತಿಲ್ಲ. ಕುಮಾರಸ್ವಾಮಿ ಎರಡು ಬಾರಿ ಗೆದ್ದು ಯಾವುದೇ ಅಭಿವೃದ್ಧಿ ಮಾಡಿಲ್ಲ. ಅವರದ್ದು ಸ್ವಾರ್ಥ ರಾಜಕಾರಣ. ಜನರ ಅಭಿವೃದ್ಧಿ ಮಾಡದೇ ಮಗನನ್ನ ತಂದು ನಿಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ಅವರಿಗೆ ಜನವಿರೋಧಿ ಅಲೆ ಇದೆ ಎಂದು ಹೇಳಿದರು.