ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದವರನ್ನ ನಂಬಿ ಭೇಟಿಗೆ ಆಹ್ವಾನಿಸುವ ಮುನ್ನ ಎಚ್ಚರ..!

ಶನಿವಾರ, 7 ಜನವರಿ 2023 (18:07 IST)
ಆ್ಯಪ್ ಮೂಲಕ ಗಾಳ ಹಾಕಿ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಸೋಲದೇವನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ‌. ಸುನಿಲ್ ಹಾಗೂ ಲಕ್ಷ್ಮಿಪ್ರಿಯ ಬಂಧಿತ ಆರೋಪಿಗಳು. ಮೋಸ ಹೋದ 26 ವರ್ಷದ ವ್ಯಕ್ತಿಯೊಬ್ಬ ನೀಡಿದ ದೂರಿನನ್ವಯ ಆರೋಪಿಗಳನ್ನ ಬಂಧಿಸಲಾಗಿದೆ.
 
ಆ್ಯಪ್ ಮೂಲಕ ದಿವ್ಯಾ ಎಂಬ ಹೆಸರಿನಲ್ಲಿ ಪರಿಚಯವಾಗಿದ್ದವಳ ಜೊತೆ ಸಲುಗೆ ಸಂಪಾದಿಸಿದ್ದ ದೂರುದಾರ ವ್ಯಕ್ತಿ ಒಂದಷ್ಟು ಫೋಟೋ, ವೀಡಿಯೋ ವಿನಿಮಯವಾದ ಬಳಿಕ ಜನವರಿ 4ರಂದು ತನ್ನ ಮನೆಗೆ ಆಹ್ವಾನಿಸಿದ್ದ. ದಿವ್ಯಾ ಎಂಬ ಹೆಸರಿನಲ್ಲಿ ಪ್ರತಿಕ್ರಿಯಿಸಿದ್ದ ಆರೋಪಿ ಸುನಿಲ್ 'ನಾನು ಇವತ್ತು ಬ್ಯುಸಿ, ನನ್ನ ಸಹೋದರಿ ಲಕ್ಷ್ಮಿಪ್ರಿಯಳನ್ನ ಕಳಿಸುತ್ತೇನೆ' ಎಂದಿದ್ದ. ಅದರಂತೆ ದೂರುದಾರ ವ್ಯಕ್ತಿ ಆರೋಪಿ ಲಕ್ಷ್ಮಿಪ್ರಿಯಳನ್ನ ಕೊಡುಗೆ ತಿರುಮಲಾಪುರದ ತನ್ನ ಮನೆಗೆ ಕರೆದೊಯ್ದಿದ್ದ. ಮನೆಯೊಳಗೆ ಹೋಗುತ್ತಿದ್ದಂತೆ ಎಂಟ್ರಿಯಾಗಿದ್ದ ಸುನಿಲ್, ದೂರುದಾರನಿಗೆ 'ನೀನು ಲಕ್ಷ್ಮಿಪ್ರಿಯಳನ್ನ ಜೊತೆಯಲ್ಲಿ ಕರೆ ತಂದಿರುವ ವೀಡಿಯೋ, ಫೋಟೋ ಪೊಲೀಸರಿಗೆ ಕೊಡುವುದಾಗಿ ಬೆದರಿಸಿದ್ದ. ಬಳಿಕ ಇಬ್ಬರೂ ಆರೋಪಿಗಳು ದೂರುದಾರನ ಮನೆಯಲ್ಲಿದ್ದ 45 ಗ್ರಾಂ ಚಿನ್ನಾಭರಣ, ನಗದು ಕಿತ್ತುಕೊಂಡು ಬೈಕಿನಲ್ಲಿ ಪರಾರಿಯಾಗಿದ್ದರು.
 
ಮೋಸ ಹೋದ ವ್ಯಕ್ತಿ ನೀಡಿರುವ ದೂರಿನನ್ವಯ ಕಾರ್ಯಾಚರಣೆ ಕೈಗೊಂಡ ಸೋಲದೇವನಹಳ್ಳಿ ಪೊಲೀಸರು ಇಬ್ಬರೂ ಆರೋಪಿಗಳನ್ನ ಬಂಧಿಸಿದ್ದು 2.2 ಲಕ್ಷ ಮೌಲ್ಯದ 45 ಗ್ರಾಂ ಚಿನ್ನಾಭರಣ 1 ಮೊಬೈಲ್ ಹಾಗೂ 2 ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ