ಬೆಂಗಳೂರು: ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆರಾಯ ಇಂದು ಬೆಳ್ಳಂ ಬೆಳಿಗ್ಗೆಯೇ ಬಂದಿದ್ದಾನೆ. ಬೆಳಿಗ್ಗೆಯಿಂದಲೇ ವಿಪರೀತ ಮಳೆ ಸುರಿಯುತ್ತಿದ್ದು ಕಚೇರಿಗೆ ಹೋಗುವವರು ಪರದಾಡುವಂತಾಗಿದೆ.
ಬೆಂಗಳೂರಿಗೆ ಈ ವಾರ ನಿರಂತರ ಮಳೆಯಾಗಲಿದೆ ಎಂದು ಈಗಾಗಲೇ ಹವಾಮಾನ ವರದಿ ನೀಡಿತ್ತು. ನಗರಕ್ಕೆ ಇಂದೂ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ. ವಿಪರೀತ ಮಳೆಯಿಂದಾಗಿ ಬೆಳಿಗ್ಗೆಯೇ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿತ್ತು.
ಬಹುತೇಕ ರಸ್ತೆಗಳಲ್ಲಿ ನೀರು ನಿಂತು ಸ್ವಿಮ್ಮಿಂಗ್ ಪೂಲ್ ನಂತಾಗಿದೆ. ನಿನ್ನೆ ಮಳೆಯಿಂದಾಗಿ ಓರ್ವ ಮಹಿಳೆ ಸಾವನ್ನಪ್ಪಿದ ವರದಿಯಾಗಿತ್ತು. ಹೀಗಾಗಿ ಹೊರಗೆ ಹೋಗುವವರು ಎಚ್ಚರಿಕೆ ವಹಿಸಬೇಕಾಗುತ್ತದೆ.
ಆದಷ್ಟು ಕಚೇರಿಗಳಿಗೆ, ಕೆಲಸಕ್ಕೆ ತೆರಳುವವರು ಎಂದಿಗಿಂತ ಮುಂಚಿತವಾಗಿಯೇ ಹೊರಡುವುದು ಉತ್ತಮ. ಹೆಚ್ಚಾಗಿ ಐಟಿ ಬಿಟಿ ಉದ್ಯೋಗಿಗಳು ತೆರಳುವ ಮಾನ್ಯತಾ ಟೆಕ್ ಪಾರ್ಕ್, ಸಿಲ್ಕ್ ಬೋರ್ಡ್ ಜಂಕ್ಷನ್ ಸೇರಿದಂತೆ ಪ್ರಮುಖ ರಸ್ತೆಗಳು ನೀರಿನಿಂದ ಆವೃತವಾಗಿದೆ. ಹೀಗಾಗಿ ಅವಕಾಶವಿದ್ದಲ್ಲಿ ವರ್ಕ್ ಫ್ರಂ ಹೋಂ ತೆಗೆದುಕೊಳ್ಳುವುದು ಉತ್ತಮ. ಇದರಿಂದ ಅನಗತ್ಯ ಅಪಾಯ ಮೈಮೇಲೆಳೆದುಕೊಳ್ಳುವುದೂ ತಪ್ಪುತ್ತದೆ. ಈ ವಾರವಿಡೀ ಈ ವಾತಾವರಣ ಮುಂದುವರಿಯಲಿದೆ.