ಪ್ರಜ್ವಲ್‌ ಪ್ರತ್ಯಕ್ಷವಾದ ಬೆನ್ನಲ್ಲೇ ನಿರೀಕ್ಷಣಾ ಜಾಮೀನು ಕೋರಿದ ಭವಾನಿ ರೇವಣ್ಣ

Sampriya

ಸೋಮವಾರ, 27 ಮೇ 2024 (19:22 IST)
ಬೆಂಗಳೂರು: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಅಜ್ಞಾನ ಸ್ಥಳದಿಂದ ವಿಡಿಯೊ ಮಾಡಿ ಇದೇ 31ರಂದು ಎಸ್‌ಐಟಿ ವಿಚಾರಣೆಗೆ ಹಾಜರಾಗುವ ಹೇಳಿಕೆ ಬೆನ್ನಲ್ಲೇ ಅವರ ತಾಯಿ ಭವಾನಿ ರೇವಣ್ಣ ಅವರು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸೆಷನ್ಸ್‌ ಕೋರ್ಟ್‌ಗೆ ಅವರು ನಿರೀಕ್ಷಣಾ ಜಾಮೀನು ಕೋರಿ  ಅರ್ಜಿ ಸಲ್ಲಿಸಿದ್ದಾರೆ.

ಮಾಜಿ ಸಚಿವ ಎಚ್‌.ಡಿ. ರೇವಣ್ಣ ಹಾಗೂ ಭವಾನಿ ರೇವಣ್ಣ ವಿರುದ್ಧ ಕೆ.ಆರ್‌.ನಗರದ ಸಂತ್ರಸ್ತೆಯ ಅಪಹರಣ ಸಂಬಂಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ರೇವಣ್ಣ ಅವರಿಗೆ ಈಗಾಗಲೇ ಜಾಮೀನು ಸಿಕ್ಕಿದೆ.  

ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ರೇವಣ್ಣ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿತ್ತು. ಆರು ದಿನಗಳ ನಿರಂತರ ಕಾನೂನು ಸಮರದ ಬಳಿಕ ಅವರಿಗೆ ಮೇ 13ರಂದು ಜಾಮೀನು ದೊರೆತಿತ್ತು. ನಂತರ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲೂ ಮಾಜಿ ಸಚಿವ ಎಚ್‌ಡಿ ರೇವಣ್ಣ  ಅವರಿಗೆ ಮೇ 20ರಂದು ಜಾಮೀನು ಮಂಜೂರಾಗಿತ್ತು. ಈ ನಡುವೆ ವಿಚಾರಣೆಗೆ ಹಾಜರಾಗುವಂತೆ ಭವಾನಿ ರೇವಣ್ಣ ಅವರಿಗೂ ನೋಟಿಸ್‌ ನೀಡಲಾಗಿತ್ತು.

ಅಪಹರಣ ಮಾಡಿದ ಪ್ರಕರಣದಲ್ಲಿ ಕುಮ್ಮಕ್ಕು ಕೊಟ್ಟ ಆರೋಪವನ್ನು ಭವಾನಿ ರೇವಣ್ಣ ಹೊತ್ತಿದ್ದಾರೆ. ಮೊದಲ ನೋಟಿಸ್‌ಗೆ ಉತ್ತರಿಸದ ಹಿನ್ನೆಲೆಯಲ್ಲಿ ಇತ್ತೀಚೆಗೆ ಎರಡನೇ ನೋಟಿಸ್ ಜಾರಿ ಮಾಡಲಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ