ತೀವ್ರ ಸಂಚಲನ ಮೂಡಿಸಿರುವ ಬಿಟ್ ಕಾಯಿನ್ ಪ್ರಕರಣ

ಬುಧವಾರ, 17 ನವೆಂಬರ್ 2021 (21:44 IST)
ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಬಿಟ್ ಕಾಯಿನ್ ಪ್ರಕರಣ ಸಂಬಂಧ ಹ್ಯಾಕರ್ ಶ್ರೀಕೃಷ್ಣ ಆಲಿಯಾಸ್ ಶ್ರೀಕಿಗೆ ಜೀವ ಬೆದರಿಕೆ ಸಂಬಂಧ ಭದ್ರತೆ ನೀಡಲು ಮುಂದಾಗಿದ್ದರೂ ಶ್ರೀಕಿ ಮಾತ್ರ ತಲೆಮರೆಸಿಕೊಂಡಿರುವುದು ಪೊಲೀಸರಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.
ಶ್ರೀಕಿಗೆ ಜೀವ ಬೆದರಿಕೆಯಿದೆ. ಪೊಲೀಸರು ಭದ್ರತೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದರು‌. ಈ ಸಂಬಂಧ ನಗರ ಪೊಲೀಸ್​ ಆಯುಕ್ತ ಕಮಲ್ ಪಂತ್ ಸೂಚನೆಯ ಮೇರೆಗೆ ಸಬ್​ಇನ್​ಸ್ಪೆಕ್ಟರ್ ಒಬ್ಬರನ್ನು ಶ್ರೀಕಿ ಭದ್ರತೆಗೆ ನಿಯೋಜಿಸಲಾಗಿದೆ‌. ಭದ್ರತೆ ನೀಡಲೆಂದು ಶ್ರೀಕಿ ಮನೆಯವರನ್ನು ಸಂಪರ್ಕಿಸಿದರೂ ಶ್ರೀಕೃಷ್ಣ ಅಜ್ಞಾತ ಸ್ಥಳದಲ್ಲಿದ್ದಾನೆ‌. ಶ್ರೀಕಿ ಎಲ್ಲಿದ್ದಾನೆ ಎಂಬುದು ನಮಗೂ ಗೊತ್ತಿಲ್ಲ. ಮನೆಯಿಂದ ಹೊರಗೆ ಹೋಗಿರುವ ಶ್ರೀಕಿ ಮರಳಿ ಬಂದಿಲ್ಲ. ಮೊಬೈಲ್ ಕೂಡ ಬಳಸುತ್ತಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದರಿಂದ ಭದ್ರತೆ ಒದಗಿಸಲು ಪೊಲೀಸರು ಪರದಾಡುವಂತಾಗಿದೆ.
ಮತ್ತೊಂದಡೆ ಶ್ರೀಕಿಯಿಂದ ವಶಪಡಿಸಿಕೊಂಡಿದ್ದ ಲ್ಯಾಪ್​ಟಾಪ್​ನಿಂದ 76 ಲಕ್ಷ ಕೀ ವರ್ಡ್​ಗಳನ್ನು ವಿಧಿವಿಜ್ಞಾನ ಆಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಶ್ರೀಕಿ ಕ್ಲೌಡ್ ಅಕೌಂಟ್​ನಲ್ಲಿ 27 ಈ ವ್ಯಾಲೆಟ್, ಪ್ರೈವೇಟ್ ಕೀ ಹಾಗೂ ವಿಳಾಸಗಳು ಪತ್ತೆಯಾಗಿವೆ ಎಂದು ಸೈಬರ್ ಐಡಿ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಬಹಿರಂಗಪಡಿಸಿದೆ.
ಶ್ರೀಕಿಯಾ ಅಮೆಜಾನ್ ವೆಬ್ ಸರ್ವಿಸ್ ಖಾತೆ ಸೇರಿದಂತೆ ಕ್ಲೌಡ್ ಅಕೌಂಟ್ ವಿಶ್ಲೇಷಣೆ ನಡೆಸುತ್ತಿದೆ. ತನಿಖಾಧಿಕಾರಿಗಳ ಹಾದಿ ತಪ್ಪಿಸಲು ಶ್ರೀಕಿ ಬಿಟ್ ಕಾಯಿನ್ ಕೋರ್ ತಂತ್ರಾಂಶವನ್ನೇ ಹ್ಯಾಕ್ ಮಾಡಿ ತಿರುಚಿರುವ ಶಂಕೆ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ