ರಾಜಕಾಲುವೆ ಒತ್ತುವರಿ ತೆರವಿನಲ್ಲಿ ಬಡವರಿಗೊಂದು ನ್ಯಾಯ, ಬಲ್ಲಿದವರಿಗೊಂದು ನ್ಯಾಯ: ಬಿಜೆಪಿ ಕಿಡಿ

ಶುಕ್ರವಾರ, 26 ಆಗಸ್ಟ್ 2016 (14:28 IST)
ರಾಜಕಾಲುವೆ ಒತ್ತುವರಿ ತೆರವು ಕಾರ್ಯಚರಣೆಗೆ ಸಂಬಂಧಿಸಿದಂತೆ ಕೇವಲ ಬಡವರ ಸ್ವತ್ತುಗಳನ್ನು ಮಾತ್ರ ತೆರವುಗೊಳಿಸಲಾಗುತ್ತಿದೆ. ಆದರೆ, ಶ್ರೀಮಂತರು ಹಾಗೂ ಪ್ರಭಾವಿಗಳ ಸ್ವತ್ತುಗಳನ್ನು ತೆರವುಗೊಳಿಸಲಾಗುತ್ತಿಲ್ಲ. ಇದರಿಂದ, ಬಡವರಿಗೊಂದು ನ್ಯಾಯ, ಬಲ್ಲಿದವರಿಗೊಂದು ನ್ಯಾಯ ಮಾಡಿದಂತಾಗಿದೆ ಎಂದು ಬಿಜೆಪಿ ವಕ್ತಾರ ಎನ್‌.ಆರ್.ರಮೇಶ್ ಆರೋಪಿಸಿದ್ದಾರೆ. 
 
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒತ್ತುವರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳ ಆದೇಶವಿದ್ದರು ಸಹ ಬಿಬಿಎಂಪಿ ಅಧಿಕಾರಿಗಳು ಶ್ರೀಮಂತರು ಹಾಗೂ ಪ್ರಭಾವಿಗಳ ಸ್ವತ್ತುಗಳನ್ನು ತೆರವುಗೊಳಿಸಲಾಗುತ್ತಿಲ್ಲ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ದರು.
 
ಬಡವರಿಗೊಂದು ನ್ಯಾಯ, ಬಲ್ಲಿದವರಿಗೊಂದು ನ್ಯಾಯ ಮಾಡುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜಕಾರಣಿಗಳು ಹಾಗೂ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದೇನೆ. ಈ ಕುರಿತು ಸೆಪ್ಟೆಂಬರ್ 6 ರಂದು ವಿಚಾರಣೆ ನಡೆಯಲಿದೆ ಎಂದು ತಿಳಿಸಿದರು.
 
ಬಿಬಿಎಂಪಿ ಅಧಿಕಾರಿಗಳು ಕೇವಲ ಮಧ್ಯಮ ವರ್ಗದ ಜನರ ಸ್ವತ್ತುಗಳ ಮೇಲೆ ಕಣ್ಣೀಟ್ಟಿದ್ದಾರೆ. ಏನೇ ಹೇಳಿದರೂ ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಗುತ್ತಿದೆ. ಈ ಕುರಿತು ಭಾರತೀಯ ಜನತಾ ಪಕ್ಷದಿಂದ ರಾಜ್ಯ ಮಟ್ಟದಲ್ಲಿ ಹೋರಾಟ ಕೈಗೊಳ್ಳುತ್ತೇವೆ ಎಂದು ಬಿಜೆಪಿ ವಕ್ತಾರ ಎನ್‌.ಆರ್.ರಮೇಶ್ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ