ಮಂಡ್ಯ : ಈ ಮೊದಲು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿ ಅಶೋಕ್ರನ್ನು ಬಿಜೆಪಿ ನೇಮಕ ಮಾಡಿತ್ತು. ಈ ನೇಮಕದ ಬೆನ್ನಲ್ಲೇ ಸ್ವಪಕ್ಷೀಯರಿಂದ ವಿರೋಧ ವ್ಯಕ್ತವಾಗಿದ್ದು, ಪಕ್ಷಕ್ಕೆ ಸಾಕಷ್ಟು ಮುಜುಗರ ಉಂಟುಮಾಡಿದೆ.
ಇದೀಗ ಪಕ್ಷಕ್ಕೆ ಎದುರಾಗಿರುವ ಮುಜುಗರ ತಪ್ಪಿಸಲು ಬಿಜೆಪಿ ಮತ್ತೆ ಬದಲಾವಣೆ ಮಂತ್ರ ಜಪಿಸುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಕಮಾಲ್ ಮಾಡುವ ಉದ್ದೇಶದಿಂದ ಬಿಜೆಪಿ ಕಳೆದ ಒಂದು ವರ್ಷದಿಂದ ಪಕ್ಷ ಸಂಘಟನೆಗೆ ಒತ್ತು ನೀಡಿ ಸಾಕಷ್ಟು ಸ್ಟ್ಯಾಟರ್ಜಿ ಮಾಡುತ್ತಾ ಇದೆ.
ಸಚಿವ ಗೋಪಾಲಯ್ಯ ಅವರು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾಗ ಜಿಲ್ಲೆಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉತ್ಸಾಹದಿಂದ ಸಂಘಟನೆ ಕೆಲಸದಲ್ಲಿ ತೊಡಗಿದ್ದರು.
ಬಿಜೆಪಿ ಅದ್ಯಾವ ಸ್ಟಾಟರ್ಜಿ ಇಟ್ಟುಕೊಂಡೊ ಏನೋ ಜ. 24ರಂದು ಗೋಪಾಲಯ್ಯ ಅವರ ಬದಲಿಗೆ ಸಚಿವ ಆರ್.ಅಶೋಕ್ರನ್ನು ಮಂಡ್ಯ ಉಸ್ತುವಾರಿಯಾಗಿ ನೇಮಕ ಮಾಡಿತು. ಇದಾದ ನಂತರ ಅಶೋಕ್ ಜ. 25ರಂದು ಶ್ರೀರಂಗಪಟ್ಟಣದಲ್ಲಿ ಸಂಭಾವ್ಯ ಅಭ್ಯರ್ಥಿ ಸಚ್ಚಿದಾನಂದ ಪರ ಪ್ರಚಾರದ ಕೆಲಸ ಮಾಡಿ ಜ. 26ರಂದು ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ಮಾಡಿದರು.