ಕೆಎನ್ ರಾಜಣ್ಣ ಕಿತ್ತು ಹಾಕಿದ್ದು ಇದೇ ಕಾರಣಕ್ಕೆ ಅಂತಿದ್ದಾರೆ ಬಿಜೆಪಿ ನಾಯಕರು

Krishnaveni K

ಮಂಗಳವಾರ, 12 ಆಗಸ್ಟ್ 2025 (09:09 IST)
Photo Credit: BJP X
ಬೆಂಗಳೂರು: ಸಚಿವ ಸ್ಥಾನದಿಂದ ದಿಡೀರ್ ಆಗಿ ಕೆಎನ್ ರಾಜಣ್ಣ ಅವರನ್ನು ಕಿತ್ತು ಹಾಕಿರುವುದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಎನ್ ರಾಜಣ್ಣರನ್ನು ಕಿತ್ತು ಹಾಕಿರುವುದರ ಹಿಂದಿನ ಕೈ ಯಾರದ್ದು ಎಂದು ಈಗ ಎಲ್ಲರ ಪ್ರಶ್ನೆಯಾಗಿದೆ.

ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ಸ್ವತಃ ಡಿಕೆ ಶಿವಕುಮಾರ್ ಅವರೇ ಇದರ ಹಿಂದಿನ ಸೂತ್ರಧಾರ ಎಂದಿದ್ದಾರೆ. ಕೆಎನ್ ರಾಜಣ್ಣ ಸತ್ಯ ಹೇಳಿದ್ದರು. ಇದಕ್ಕೇ ಹೈಕಮಾಂಡ್ ಗೆ ಸಹಿಸಲಾಗಿಲ್ಲ. ತಮಗೆ ಆದ ಅವಮಾನಕ್ಕೆ ಅವರನ್ನು ವಜಾ ಮಾಡಲಾಗಿದೆ ಎಂದು ಬಿಜೆಪಿ ನಾಯಕರು ಬಣ್ಣಿಸಿದ್ದಾರೆ.

ಕೆಎನ್ ರಾಜಣ್ಣನವರು ಸಿಎಂ ಸಿದ್ದರಾಮಯ್ಯನವರ ಆಪ್ತ ಬಳಗದಲ್ಲಿ ಕಾಣಿಸಿಕೊಂಡವರು. ಈ ಹಿಂದೆ ಸಿಎಂ ಬದಲಾವಣೆ ವಿಚಾರ ಪ್ರಸ್ತಾಪ ಮಾಡಿದಾಗಲೂ ರಾಜಣ್ಣನ ಪರವಾಗಿ ಸಿದ್ದರಾಮಯ್ಯ ನಿಂತಿದ್ದರು.

ಆದರೆ ಈಗ ಮೊನ್ನೆಯಷ್ಟೇ ರಾಹುಲ್ ಗಾಂಧಿ ಮತಗಳ್ಳತನ ಹೋರಾಟದ ವಿರುದ್ಧವೇ ರಾಜಣ್ಣ ಕಿಡಿ ಕಾರಿದ್ದು ಅವರನ್ನು ಕಿತ್ತು ಹಾಕಲು ಒಳ್ಳೆಯ ಅಸ್ತ್ರ ಸಿಕ್ಕಂತಾಗಿತ್ತು. ಹೀಗಾಗಿ ಇದೇ ನೆಪವಿಟ್ಟುಕೊಂಡು ರಾಜ್ಯ ಕಾಂಗ್ರೆಸ್ ನಲ್ಲಿ ಗೊಂದಲದ ಹೇಳಿಕೆ ನೀಡುತ್ತಿದ್ದ ರಾಜಣ್ಣನನ್ನು ಕಿತ್ತು ಹಾಕಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಮತಗಳ್ಳತನದ ವಿರುದ್ಧ ರಾಜಣ್ಣ ನೀಡಿದ್ದ ಹೇಳಿಕೆ ಹೈಕಮಾಂಡ್ ಗಮನಕ್ಕೆ ಬಂದಿತ್ತು. ಹೀಗಾಗಿ ನಿನ್ನೆ ಸಂಜೆಯೊಳಗೇ ಅವರ ರಾಜೀನಾಮೆ ಪಡೆಯಲು ಸೂಚಿಸಲಾಗಿತ್ತು. ಒಂದು ವೇಳೆ ರಾಜೀನಾಮೆ ಪಡೆಯದಿದ್ದರೆ ಪಕ್ಷದಿಂದ ಉಚ್ಛಾಟಿಸಲೂ ಖಡಕ್ ಸಂದೇಶ ರವಾನೆಯಾಗಿತ್ತು. ಹೀಗಾಗಿ ತಮ್ಮ ಆಪ್ತನಾಗಿದ್ದರೂ ಹೈಕಮಾಂಡ್ ಖಡಕ್ ಸೂಚನೆ ಬಂದಿದ್ದರಿಂದ ಸಿಎಂ ಕೈ ಕಟ್ಟಿ ಕೂರುವಂತಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ