ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟ ಬ್ರಹ್ಮಚಾರಿಗಳು
ವಯಸ್ಸು ಏರುತ್ತಿದೆ ಆದರೆ ಮದುವೆಗೆ ಯಾರೂ ಹೆಣ್ಣು ಕೊಡುತ್ತಿಲ್ಲವೆಂದು ರೊಚ್ಚಿಗೆದ್ದ ಕೆಲ ಬ್ರಹ್ಮಚಾರಿ ಯುವಕರು ಮದುವೆಯಾಗಲೆಂದು ಹರಕೆ ಹೊತ್ತು ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದು ಈ ಪಾದಯಾತ್ರೆಗೆ ಸ್ಯಾಂಡಲ್ವುಡ್ನ ಡಾಲಿ ಧನಂಜಯ್ ಚಾಲನೆ ನೀಡಿದ್ದಾರೆ. ಮಂಡ್ಯ ಜಿಲ್ಲೆ ಕೆ.ಎಂ.ದೊಡ್ಡಿ ಗ್ರಾಮದ ವೆಂಕಟೇಶ್ವರಸ್ವಾಮಿ ದೇವಾಲಯದಿಂದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಂದಿ ಯುವಕರು ಪಾದಯಾತ್ರೆ ಆರಂಭಿಸಿದ್ದಾರೆ. ಈ ಪಾದಯಾತ್ರೆಗೆ ಚಾಲನೆ ನೀಡಿರುವ ಡಾಲಿ ಧನಂಜಯ್ ಕೆಲ ದೂರ ಅವಿವಾಹಿತ ಯುವಕರೊಂದಿಗೆ ತಾವೂ ಹೆಜ್ಜೆ ಹಾಕಿದರು. ಬ್ರಹ್ಮಚಾರಿಗಳ ನೋವು ಆಲಿಸಿದ ಡಾಲಿ ಧನಂಜಯ್ ಪಾಲ್ಗೊಂಡಿರುವ ಎಲ್ಲ ಬ್ರಹ್ಮಚಾರಿಗಳು ಮುಂದಿನ ವರ್ಷದ ವೇಳೆಗೆ ಗೃಹಸ್ಥರಾಗಲಿ ಎಂದು ಹಾರೈಸಿ, ಬಡವರ ಮಕ್ಳು ಬೆಳೀಬೇಕು, ರೈತರ ಮಕ್ಳಿಗೆ ಹೆಣ್ಣು ಸಿಗ್ಬೇಕು ಎಂದ್ರು ಡಾಲಿ. ಈ ಪಾದಯಾತ್ರೆಯಲ್ಲಿ ಕೆ.ಎಂ.ದೊಡ್ಡಿ ಗ್ರಾಮದ ಅವಿವಾಹಿತರು ಮಾತ್ರವೇ ಅಲ್ಲದೆ ಇನ್ನೂ ಕೆಲವು ಗ್ರಾಮಗಳ ಅವಿವಾಹಿತ ಯುವಕರು ಹಾಗೂ ಹೊರ ರಾಜ್ಯದ ಇಬ್ಬರು ಯುವಕರು ಸಹ ಭಾಗವಹಿಸಿದ್ದು ವಿಶೇಷ. ಪಾದಯಾತ್ರೆ ತಂಡದಲ್ಲಿರುವ ಬಹುತೇಕರು ರೈತರ ಮಕ್ಕಳು, ಸ್ವತಃ ಯುವ ರೈತರೇ ಆಗಿದ್ದಾರೆ.