ಬಿಎಸ್‌ವೈ, ಶ್ರೀರಾಮುಲು ಹೆಣದ ಮೇಲೆ ಹಣ ಮಾಡಿದ ಬಗ್ಗೆ ಕೊರೊನ ಮಧ್ಯಂತರ ವರದಿಯಲ್ಲಿದೆ: ಪ್ರಿಯಾಂಕ್ ಖರ್ಗೆ

ಭಾನುವಾರ, 10 ನವೆಂಬರ್ 2024 (16:08 IST)
Photo Courtesy X
ಬೆಂಗಳೂರು: ಕೊರೋನ ಸಮಯದಲ್ಲಿ ಯಡಿಯೂರಪ್ಪ ಹಾಗೂ ಶ್ರೀರಾಮುಲು ಅವರು ಹೆಣದ ಮೇಲೆ ಹೇಗೆ ಹಣ ಮಾಡಿದರು ಎಂಬುದನ್ನು ಜಸ್ಟೀಜ್ ಕುನ್ಹಾ ಅವರ ಕೊರೋನ ಮಧ್ಯಂತರ ವರದಿಯಲ್ಲಿದೆ. ಈ ಮಧ್ಯಂತರ ವರದಿಯಲ್ಲಿ ಸುಮಾರು 700 ಕೋಟಿ ಹಗರಣದ ಬಗ್ಗೆ ಬೆಳಕು ಚೆಲ್ಲಲಾಗಿದೆ. ಸುಮಾರು 3 ಸಾವಿರ ಕೋಟಿಗೂ ಹೆಚ್ಚಿನ ಹಗರಣ ನಡೆದಿದೆ ಎದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 17.03.2020 ರಂದು 416.48 ಕೋಟಿ ಮೊತ್ತದ ಔಷಧಿಗಳು, ಕೆಮಿಕಲ್ ಗಳು, ವೈದ್ಯಕೀಯ ಸಲಕರಣೆಗಳನ್ನು ಖರೀದಿ ಮಾಡಲಾಗುತ್ತದೆ. 18.03.2020 ರಂದು ಆರೋಗ್ಯ ಇಲಾಖೆಯ ಅಡಿಯಲ್ಲಿ ಬರುವ ಅಗತ್ಯ ವಸ್ತುಗಳ ನಿಗಾವಹಿಸುವ ಸಮಿತಿಯು ನಮಗೆ 12 ಲಕ್ಷ ಪಿಪಿಈ ಕಿಟ್ ಗಳು ಬೇಕು ಎಂದು ತೀರ್ಮಾನ ಮಾಡಿ ಒಂದು ಕಿಟ್ ಗೆ ₹ 2,117.53 ಎಂದು ತೀರ್ಮಾನ ಮಾಡುತ್ತದೆ.

ಪಿಪಿಇ ಕಿಟ್ ಗಳಿಗೆ ಇಷ್ಟೇ ದರವನ್ನು ಏಕೆ ನಿಗದಿ ಮಾಡಲಾಯಿತು?. ನಂತರ ಕಾಮರ್ಸ್ ಮತ್ತು ಇಂಡಸ್ಟ್ರಿ ವಿಭಾಗವನ್ನು ಸಂಪರ್ಕಿಸಲಾಗುತ್ತದೆ. ಅವರು ಚೀನಾದಲ್ಲಿ ಬಿಗ್ ಫಾರ್ಮಸಿಟಿಕಲ್ ಮತ್ತು ಡಿಎಚ್ ಬಿ ಫಾರ್ಮಸಿಟಿಕಲ್ ಎನ್ನುವ ಕಂಪನಿಗಳಿಂದ ದರಪಟ್ಟಿಯನ್ನು ನಾವು ತರಿಸಿಕೊಂಡಿದ್ದೇವೆ ಎಂದು ಹೇಳಿದಾಗ. ಇವರು ಯಾವುದೇ ಮುಂದಾಲೋಚನೆ ಮಾಡದೇ, ಇತರಡೆ ದರವನ್ನು ಪರಿಶೀಲನೆ ಮಾಡದೆ ಪಿಪಿಇ ಕಿಟ್‌ಗಳನ್ನು ಖರೀದಿ ಮಾಡಲಾಗುತ್ತದೆ.

ಇದರ ಬಗ್ಗೆ ಅಧಿಕಾರಿಗಳು ಮೂರು ರೀತಿಯ ದರಪಟ್ಟಿ ಬಂದಿದ್ದು ಎಂದು ಹೇಳಿದಾಗ ಮುಖ್ಯಮಂತ್ರಿ ಯಡಿಯೂರಪ್ಪನವರು ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಅವರು ಅಧಿಕಾರಿಗಳಿಗೆ ನೀವು ಕಡತವನ್ನು ತಯಾರು ಮಾಡಿ ಮುಂದಿನದು ನಾವು ನೋಡಿಕೊಳ್ಳುತ್ತೇವೆ ಎಂದು ಸೂಚನೆ ನೀಡುತ್ತಾರೆ.

02.04.2020 ರಲ್ಲಿ ಯಡಿಯೂರಪ್ಪ ಅವರು ಡಿಎಚ್ ಬಿ ಹಾಂಕಾಂಗ್ ಗ್ಲೋಬಲ್ ಕಂಪನಿ ಗೆ ಒಂದು 1 ಲಕ್ಷ ಪಿಪಿಇ ಕಿಟ್ ಸರಬರಾಜು ಮಾಡುವಂತೆ ನೇರ ಆದೇಶ ಕೊಡುತ್ತಾರೆ. ಒಟ್ಟು 21.18 ಕೋಟಿ ರೂಪಾಯಿಯಾಯಿತು. ಜೊತೆಗೆ ಇಷ್ಟು ಪ್ರಮಾಣದ ಪಿಪಿಇ ಕಿಟ್ ಗಳನ್ನು ಏಳು ದಿನದ ಒಳಗಾಗಿ ಸರಬರಾಜು ಮಾಡಬೇಕು ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎನ್ನುವ ಷರತ್ತನ್ನು ವಿಧಿಸಲಾಗುತ್ತದೆ.

ನಂತರ 10.04.2020 ರಂದು ಯಡಿಯೂರಪ್ಪ ಅವರಿಂದ ಮತ್ತೊಂದು ನೇರ ಆದೇಶ ಇದೇ ಡಿಎಚ್ ಬಿ ಕಂಪನಿಗೆ ಮತ್ತೊಮ್ಮೆ 1 ಲಕ್ಷ ಪಿಪಿಇ ಕಿಟ್ ಗಳನ್ನು ಸರಬರಾಜು ಮಾಡುವಂತೆ ಸೂಚಿಸಲಾಗುತ್ತದೆ. ಆದರೆ ಈ ಬಾರಿ 2,104.53 ರೂಪಾಯಿಗೆ ನೀಡುವಂತೆ ಹೇಳಲಾಗುತ್ತದೆ. ಇದೇ ದಿನದಂದು ಬಿಗ್ ಫಾರ್ಮಸಿಟಿಕಲ್ ಕಂಪನಿ ಅವರಿಗೂ 1 ಲಕ್ಷ ಕಿಟ್ ಗಳನ್ನು ಸರಬರಾಜು ಮಾಡುವಂತೆ ಸೂಚಿಸಲಾಗುತ್ತದೆ. ಇದನ್ನು ರೂ 2,049.84 ಗಳಿಗೆ ನೀಡುವಂತೆ ಸೂಚನೆ ನೀಡಲಾಗುತ್ತದೇ. ಅಂದರೆ 62.57 ಕೋಟಿ ಹಣದ ವಹಿವಾಟು ನಡೆದಿದೆ.

ಪ್ರಧಾನಿ ನರೇಂದ್ರ ಮೋದಿಯವರು ಡಿಜಿಟಲ್ ಇಂಡಿಯಾ,  ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಹೀಗೆ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಾರೆ. ಪಾಪ ಇದನ್ನು ಬಿಜೆಪಿಯವರೇ ಹಾಳು ಮಾಡುತ್ತಿದ್ದಾರೆ.

ಕರ್ನಾಟಕದಲ್ಲಿ ಹಾಗೂ ಭಾರತದಲ್ಲಿಯೇ ಸ್ಥಳೀಯವಾಗಿ ಪಿಪಿಇ ಕಿಟ್ ಗಳನ್ನು ತಯಾರು ಮಾಡುತ್ತಿದ್ದರೂ ಸಹ ಯಡಿಯೂರಪ್ಪನವರು ಏಕೆ ಚೀನಾದಿಂದ ತರಿಸಿಕೊಂಡರು ಎಂಬುದಕ್ಕೆ ಉತ್ತರವಿಲ್ಲ.

ಕರ್ನಾಟಕ ಸ್ಟೇಟ್ ಮೆಡಿಕಲ್ ಸಪ್ಲೈ ಕಾರ್ಪೊರೇಷನ್ ಅವರು ವರದಿ ಪ್ರಕಾರ 14.03.2020 ರಂದು ಸುಮಾರು 1.2 ಲಕ್ಷ ಪಿಪಿಇ ಕಿಟ್ ಗಳನ್ನು ರೂ. 330.40 ಗೆ ಅಂದರೆ ಒಂದು ತಿಂಗಳ ಹಿಂದೆಯೇ ಖರೀದಿ ಮಾಡಿತ್ತು. ನಂತರ ಸುಮಾರು 1,900 ರೂಪಾಯಿ ದರ ವ್ಯತ್ಯಾಸದಲ್ಲಿ ಖರೀದಿ ಮಾಡಲಾಗಿದೆ. ಈ ಹಣ ಯಾರ ಜೇಬಿಗೆ ಹೋಯಿತು.

24.03.2020 ರಲ್ಲಿ ನಡೆದ ನಡೆದ ಪ್ರಕ್ಯೂರ್ಮೆಂಟ್ ಅಲ್ಲಿ ಸ್ಥಳೀಯ ಸಂಸ್ಥೆ  ಇಂಡಸ್ ಬಯೋ ಸೊಲ್ಯೂಷನ್ ಸಂಸ್ಥೆಗೆ ₹656.25 ದರದಲ್ಲಿ ಒಂದು ಪಿಪಿಇ ಕಿಟ್ ದರ ನಿಗದಿ ಮಾಡಲಾಗಿತ್ತು. ಆದರೆ 23.03.2020 ರಂದು ಅಂದ್ರೆ ಹಿಂದಿನ ದಿನ ಸ್ಥಳೀಯ 8 ತಯಾರಿಕಾ ಸಂಸ್ಥೆಗಳಿಂದ ರೂ 1,444.80 ದರಕ್ಕೆ ಪಿಪಿಇ ಕಿಟ್ ಗಳನ್ನು ಒಂದು ದಿನದ ಅಂತರದಲ್ಲಿ ಹೆಚ್ಚು ಅಂತರಕ್ಕೆ ಖರೀದಿ ಮಾಡುತ್ತಾರೆ.

ಸ್ಥಳೀಯವಾಗಿ 18 ಲಕ್ಷ ಪಿಪಿಇ ಕಿಟ್ ಗಳು ಲಭ್ಯವಿದ್ದರೂ ಸಹ ಯಡಿಯೂರಪ್ಪನವರ ಸರ್ಕಾರ ಚೀನಾ ಮೂಲದ ಕಂಪನಿಗಳಿಂದ  ಹೆಚ್ಚಿನ ಹಣಕ್ಕೆ ಏಕೆ ಖರೀದಿ ಮಾಡಿತು?

21 ಕೋಟಿಗೆ ಪಿಪಿಇ ಕಿಟ್ ಗಳನ್ನು ಖರೀದಿ ಮಾಡಲಾಗಿರುತ್ತದೆ. ಆಗ ಪೂರೈಕೆದಾರ ಕಂಪನಿಗಳು ಹಾಂಕಾಂಗ್ನಲ್ಲಿ ಲಭ್ಯವಿಲ್ಲದ ಕಾರಣ ಶಾಂಗೆನಿಂದ ತರಿಸಿಕೊಳ್ಳುವುದಾಗಿ ಹೇಳುತ್ತವೆ. ಕೇವಲ ಸಾಗಾಣಿಕ ವೆಚ್ಚವಾಗಿ ಸರ್ಕಾರ 12 ಕೋಟಿ ಖರ್ಚು ಮಾಡುತ್ತದೆ. ಇದು ವಿಪರ್ಯಾಸವಲ್ಲವೇ?

ಪೂರೈಕೆ ದಾರ ಕಂಪನಿಗಳು ತಾವು ಒಪ್ಪಿಕೊಂಡಂತೆ ಎಲ್ಲಾ ಬೇಡಿಕೆಗಳನ್ನು ಈಡೇರಿಸಿದ ಮೇಲೆ ಸರ್ಕಾರದಿಂದ ಪಾವತಿಯಾಗಬೇಕು. ಆದರೆ ಯಡಿಯೂರಪ್ಪನವರ ಸರ್ಕಾರ ತಲೆಬುಡವಿಲ್ಲದ ಚೀನಾ ಕಂಪನಿಗೆ ಶೇ. ನೂರರಷ್ಟು ಮುಂಗಡ ಹಣ ಪಾವತಿ ಮಾಡಿದೆ.

2019 ರಲ್ಲಿ ಸ್ಥಾಪನೆಯಾದ ಬಿಗ್ ಹಾಗೂ ಡಿಎಚ್ ಬಿ ಫಾರ್ಮಸಿಟಿಕಲ್ ಕಂಪನಿಗಳಿಗೆ  ಕೇವಲ ಒಂದು ವರ್ಷದ ಅಂತರದಲ್ಲಿ ದೊಡ್ಡ ಮೊತ್ತದ ಆದೇಶ ಹೇಗೆ ಸಿಗುತ್ತದೆ. ಪ್ರಸ್ತುತ ನಾನು ಇದರ ಬಗ್ಗೆ ವಿಚಾರಿಸಿದಾಗ, ಪ್ರಸ್ತುತ ಈ ಕಂಪನಿಯ ಅಸ್ತಿತ್ವದಲ್ಲಿ ಇಲ್ಲ. ಕೊರೋನ ಪ್ರಾರಂಭವಾದಾಗ ಈ ಕಂಪನಿಗಳು ಸ್ಥಾಪನೆ ಆಗುತ್ತವೆ ಕರೋನ ಮುಗಿದ ತಕ್ಷಣ ಇವು ಅಸ್ತಿತ್ವ ಕಳೆದುಕೊಳ್ಳುತ್ತವೆ. ಇವು ಯಾರ ಹೆಸರಿನಲ್ಲಿ ನೋಂದಣಿಯಾಗಿವೆ.

ಪ್ರಧಾನಿ ನರೇಂದ್ರ ಮೋದಿ ಅವರು, ಮೇಕಿಂಗ್ ಇಂಡಿಯಾ ಹೆಸರಿನಲ್ಲಿ ಚೀನಾದಿಂದ ಯಾವುದೇ ವಸ್ತುಗಳನ್ನು ಖರೀದಿಸಬಾರದು ಎಂದು ಹೇಳುತ್ತಾರೆ. ಆದರೆ ಅಂದಿನ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು, ಅಮಿತ್ ಶಾ ಅವರ ಆದೇಶವನ್ನು ಉಲ್ಲೇಖಿಸಿ ಎಲ್ಲರಿಗೂ ಆದೇಶವನ್ನು ನೀಡಿರುತ್ತಾರೆ. ಆದರೆ ಯಡಿಯೂರಪ್ಪನವರು ಚೀನಾ ಕಂಪನಿಯಿಂದಲೇ ನೇರವಾಗಿ ಖರೀದಿ ಮಾಡಿದ್ದಾರೆ.

ಪ್ರಧಾನಿ ಅವರ ಆದೇಶವನ್ನು ಉಲ್ಲಂಘಿಸಿ, ಚೀನಾದಿಂದ ಖರೀದಿ ಮಾಡಲಾಗಿದೆ ಎಂದರೆ ಇದು ದೇಶದ್ರೋಹದ ಕೆಲಸವಲ್ಲವೇ? ಇದೇ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದ್ದರೆ, ದೇಶದ್ರೋಹಿಗಳು ಎಂದು ಊಳಿಡುತ್ತಿದ್ದರು. ಬಿಜೆಪಿ ಅವರ ನಿರ್ಲಕ್ಷಿತ ಧೋರಣೆಯಿಂದ ಹೆಚ್ಚು ಜನರು ಸತ್ತಿದ್ದಾರೆ ಹೊರತು, ಕೊರೋನ ರೋಗದಿಂದ ಜನ ಸತ್ತಿಲ್ಲ.

2020-21 ರ ಸಾವಿನ ವರದಿಗಳನ್ನು ಬಿಜೆಪಿ ಸರ್ಕಾರ ಮುಚ್ಚಿ ಹಾಕಿದೆ. 1.20 ಲಕ್ಷ ಜನರ ತೀರಿ ಹೋಗಿರುವುದನ್ನು ವರದಿ ಸಲ್ಲಿಸಿಲ್ಲ ಎಂದು ಸದನಕ್ಕೆ ತಿಳಿಸಲಾಗಿದೆ.

ಡೈರೆಕ್ಟರೇಟ್ ಆಫ್ ಎಕನಾಮಿಕ್ಸ್ ಅಂಡ್ ಸ್ಟಾಟಿಸ್ಟಿಕ್ಸ್,  ಭಾರತ ಸರ್ಕಾರ  ನೀಡಿರುವ ವರದಿಯಂತೆ 2 ಲಕ್ಷ 29 ಸಾವಿರ ಜನರು2020 ಜನವರಿಯಿಂದ ಜುಲೈ ಅವಧಿಯಲ್ಲಿ ಹಾಗೂ 2021 ರ ಜನವರಿಯಿಂದ ಜುಲೈ ತನಕ 4.26 ಲಕ್ಷ ಜನರು ಸಾವನಪ್ಪಿದ್ದಾರೆ. ಆದರೆ ಬಿಜೆಪಿ ಸರ್ಕಾರ 37,206 ಎಂದು ಸುಳ್ಳು ಹೇಳಿದೆ.

ಜನರು ಅಂದಿನ ಬಿಜೆಪಿ ಸರ್ಕಾರದ ನಿರ್ಲಕ್ಷ ಮತ್ತು ದುರಾಸೆಯಿಂದ ಸತ್ತಿದ್ದಾರೆ. ಬಿಜೆಪಿಯವರು ಕೊರೋನ ಸಮಯದಲ್ಲಿ ಹೆಣದ ಮೇಲೆ ಹಣ ಮಾಡಿದ್ದರು. ಇದು ಕೊರೊನಾದಿಂದ ಆಗಿರುವ ಸಾವುಗಳಲ್ಲ ಬಿಜೆಪಿಯ ಹತ್ಯೆ. ಬಿಜೆಪಿಯಿಂದ ಕರ್ನಾಟಕದ ಜನರ ಹತ್ಯಾಕಾಂಡ ನಡೆದಿದೆ. ದುಡ್ಡಿನ ಆಸೆಗೆ ಇದೆಲ್ಲಾ ನಡೆದಿದೆ.

ಈ ಅಂಕಿ-ಅಂಶಗಳನ್ನು ಕಾಂಗ್ರೆಸ್ ಸರ್ಕಾರ ನೀಡಿರುವುದಲ್ಲ, ಬದಲಾಗಿ ಮೋದಿ ಸರ್ಕಾರವೇ ನೀಡಿರುವುದು. ಕಳಪೆ ಮಾತ್ರೆಗಳು, ಕಳಪೆ ವ್ಯಾಕ್ಸಿನ್, ಪಿಪಿಇ ಕಿಟ್ ಹಾಗೂ ಇತರೆ ವೈದ್ಯಕೀಯ ಸಲಕರಣೆಗಳನ್ನು ತಂದು ಜನರ ಜೀವ ತೆಗೆಯಲಾಗಿದೆ. ಅನೇಕ ಮಕ್ಕಳು ತಂದೆ ತಾಯಿಗಳನ್ನು ಕರೆದುಕೊಂಡಿದ್ದಾರೆ. ಕುಟುಂಬದ ಆಧಾರವೇ ಬಿದ್ದು ಹೋಗಿದೆ. ಮಾಧ್ಯಮ ವರ್ಗವೇ ಸಂಕಷ್ಟದಲ್ಲಿದೆ. ಅನೇಕ ಉದ್ದಿಮೆಗಳು ಬಿದ್ದು ಹೋಗಿದ್ದು, ಜನ ಕೆಲಸವಿಲ್ಲದೆ ಅಲೆಯುತ್ತಿದ್ದಾರೆ.

ಯಡಿಯೂರಪ್ಪನವರು ಹಾಗೂ  ಅವರ ಮಗ ವಿಜಯೇಂದ್ರ ಅವರನ್ನು ಬಿಜೆಪಿ ಎಲ್ಲಾ ಹುದ್ದೆಗಳಿಂದ ಕೆಳಗೆ ಇಳಿಸಬೇಕು.

ಕನ್ನಡಿಗರಿಗೆ ಪದೇಪದೇ ಅವಮಾನ ಮಾಡಲಾಗುತ್ತಿದೆ. ಕನ್ನಡಿಗರ ಬೆವರು, ದುಡಿಮೆ, ಶ್ರಮ, ಜ್ಞಾನ, ಸಂಪತ್ತು, ಮಾನವ ಸಂಪನ್ಮೂಲ ಸೇರಿದಂತೆ ಎಲ್ಲವೂ ಬೇಕು. ಇದೆಲ್ಲವನ್ನು ಪಡೆದು ಅವಮಾನ ಮಾಡಲಾಗುತ್ತಿದೆ.

ನಾನು ತಿನ್ನಲ್ಲ ತಿನ್ನಲು ಬಿಡುವುದಿಲ್ಲ ಎಂದು ಹೇಳುತ್ತಿದ್ದ ಮೋದಿಯವರು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ಉತ್ತರಿಸಬೇಕು. ರೂ. 700 ಕೋಟಿ ಕೊರೋನ ಹಗರಣವನ್ನು ಕಾಂಗ್ರೆಸ್ ಅವರು ಮಾಡಿದ್ದರೆ ಪ್ರಧಾನಿ ಮೋದಿ ಅವರು ಉತ್ತರಿಸಬೇಕು. ನಾವು ನಿಮ್ಮಂತೆ ಹಿಟ್ ಅಂಡ್ ರನ್ ಮಾಡುವುದಿಲ್ಲ.

ಬಿಜೆಪಿಯ ಬಾಡಿಗೆ ಭಾಷಣಕಾರರು ಹೇಳುವಂತೆ. ಪ್ರಧಾನಿ ಮೋದಿ ಅವರ ಲ್ಯಾಪ್ ಟಾಪ್ ಗೆ ದೇಶದ ಎಲ್ಲಾ ಆಸ್ಪತ್ರೆಗಳ ಸಿಸ್ಟಮ್ ಗಳು ಕನೆಕ್ಟ್ ಆಗಿವೆಯಂತೆ. ನೋಟು ಬ್ಯಾನ್ ಸಂದರ್ಭದಲ್ಲಿ ಹೊಸ ಎರಡು ಸಾವಿರ ರೂಪಾಯಿ ನೋಟುಗಳಿಗೆ ಜಿಪಿಎಸ್ ಚಿಪ್ಗಳನ್ನು ಅಳವಡಿಸಲಾಗಿದೆ. ಐನೂರು ನೋಟುಗಳಿಗೆ ಯಾವುದೋ ಬಣ್ಣ ಬಳಿಯಲಾಗಿದೆ. ಎಲ್ಲಾ ನೋಟುಗಳನ್ನು ಒಂದೇ ಕಡೆ ಇಟ್ಟರೆ ಅದನ್ನು ಉಪಗ್ರಹದ ಮೂಲಕ ಕಂಡುಹಿಡಿಯಬಹುದು ಎಂದು ಮೋದಿ ಪ್ರಣೀತ ಬಾಡಿಗೆ ಭಾಷಣಕಾರರು ಹೇಳುತ್ತಿದ್ದರು.

ಇಂತಹ ಮೋದಿ ಅವರಿಗೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಏನು ನಡೆಯುತ್ತಿದೆ ಎಂಬುದು ತಿಳಿಯಲಿಲ್ಲವೇ?. ನಾವು ಇಂದು ಬಿಜೆಪಿ ಕಾರ್ಯದಲ್ಲಿ ನಡೆದ ಕೋರೊನಾ ಹಗರಣದ ಬಗ್ಗೆ ಸಾಕ್ಷಿ ಸಮೇತ ಮಾತನಾಡುತ್ತಿದ್ದೇವೆ. ನಾವುಗಳು ಸುಳ್ಳಿನ ಕಾರ್ಖಾನೆಯ ಮಾಲೀಕರಲ್ಲ.

ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಜಾರಿಗೆ ತಂದರೆ ಹಾರ್ದಿಕ ಸಂಕಷ್ಟ ಎಂದು ಬೊಗಳೆ ಬಿಡುತ್ತಾರೆ. ಹಾಗಾದರೆ ಇವರು ಮಾಡಿರುವ ಹಗರಣ ಯಾವುದು? ಕರ್ನಾಟಕ ಗ್ಯಾರಂಟಿ ಯೋಜನೆಗಳ ಮೇಲೆ ಮಹಾರಾಷ್ಟ್ರ ಸರ್ಕಾರ ಹೇಳಿರುವ ಸುಳ್ಳಿನ ವಿರುದ್ಧ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಮಾನಹಾನಿ ಪ್ರಕರಣ ದಾಖಲಿಸುವ ಬಗ್ಗೆ ಯೋಚಿಸುತ್ತಿದೆ.

ಮಾಧ್ಯಮಗೋಷ್ಠಿಯಲ್ಲಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು ಇದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ