ಕೊರೊನಾ ಸಂಕಷ್ಟದ ಸಮಯದಲ್ಲೂ ಸಾವಿರ ಕ್ವಿಂಟಾಲ್ ಬಾಳೆಕಾಯಿ ಖರೀದಿ ಮಾಡಲಾಗಿದೆ.
ಈ ಮೂಲಕ ಉತ್ತರಕನ್ನಡ ಜಿಲ್ಲೆ ಶಿರಸಿಯ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಸಂಘವು ರೈತರ ಶ್ರಮ ವ್ಯರ್ಥವಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕೊರೊನಾ ಸೊಂಕಿನ ಹಿನ್ನೆಲೆಯಲ್ಲಿ ಇಡೀ ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿತ್ತು. ಪರಿಣಾಮ ಬೆಳೆದ ಬಾಳೆಕಾಯಿಯನ್ನು ಎಲ್ಲೂ ಮಾರಾಟ ಮಾಡಲು ಸಾಧ್ಯವಾಗದೇ ರೈತರು ಅತಂತ್ರರಾಗಿದ್ದರು. ಬಾಳೆಕಾಯಿ ಬೆಳೆದ ರೈತರು ತೀವ್ರ ನಷ್ಟ ಹೊಂದಿ ಸಂಕಷ್ಟಕ್ಕೊಳಗಾಗಿದ್ದರು. ಈ ಸಮಯದಲ್ಲಿ ರೈತರ ನೆರವಿಗೆ ಮುಂದಾದ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಸಂಘ ರಾಜ್ಯದಲ್ಲಿಯೇ ಮೊಟ್ಟ ಬಾರಿಗೆ ಬಾಳೆಕಾಯಿ ಟೆಂಡರ್ ವ್ಯವಸ್ಥೆ ಕಲ್ಪಿಸಿತ್ತು. ಯಾವುದೇ ಮಧ್ಯವರ್ತಿಗಳಿಲ್ಲದೇ ನೇರವಾಗಿ ರೈತರಿಂದ ಬಾಳೆಕಾಯಿ ಖರೀದಿಗೆ ಸಂಘ ಮುಂದಾಯಿತು.
ಇದು ಕೇವಲ ಶಿರಸಿಯಲ್ಲಷ್ಟೇ ಅಲ್ಲದೇ ಪಕ್ಕದ ಯಲ್ಲಾಪುರ, ಸಿದ್ದಾಪುರದಲ್ಲೂ ಸಹ ಬಾಳೆಕಾಯಿ ಟೆಂಡರ್ ವ್ಯವಸ್ಥೆ ಮಾಡಿತ್ತು. ಈ ಟೆಂಡರ್‌ಗಳಲ್ಲಿ ಭಾಗವಹಿಸಿದ ಸುಮಾರು ಮೂನ್ನೂರಕ್ಕೂ ಹೆಚ್ಚು ರೈತರು ತಾವು ಬೆಳೆದ ಬಾಳೆಕಾಯಿಯನ್ನು ಮಾರಾಟ ಮಾಡಿದ್ದಾರೆ.
ಸಾಮಾನ್ಯ ದಿನಗಳಲ್ಲಿ ಕೆಜಿಗೆ ಸರಿಸುಮಾರು 10 ರೂ. ವರೆಗೆ ಮಾರಾಟವಾಗುತ್ತಿದ್ದ ಬಾಳೆಕಾಯಿ ಈ ಟೆಂಡರ್‌ನಲ್ಲಿ ಸುಮಾರು18 ರಿಂದ 20 ರೂ. ವರೆಗೆ ಮಾರಾಟವಾಗಿದೆ. ಅಂದರೇ ಸುಮಾರು 8 ರಿಂದ 10ರೂ. ವರೆಗೆ ಪ್ರತಿ ಕೆಜಿಯ ಮೇಲೆ ಬಾಳೆಕಾಯಿ ಬೆಳೆದ ರೈತರು ಲಾಭ ಪಡೆದಿದ್ದಾರೆ. ಇನ್ನೂ ಇಲ್ಲಿ ಖರೀದಿಸಿದ ಬಾಳೆಕಾಯಿಯನ್ನು ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಪಕ್ಕದ ಗೋವಾ ಹಾಗೂ ಕೇರಳ ರಾಜ್ಯಗಳಿಗೂ ಕಳುಹಿಸಲಾಗಿದೆ.