ಬೆಂಗಳೂರು: ಸ್ವಾಮೀಜಿಗಳು ಸಹಜವಾಗಿ ಆಕ್ರೋಶದಿಂದ ಮಾತನಾಡಿದ್ದಾರೆ. ಸರಕಾರವು ದೇಶದ್ರೋಹಿಗಳು, ದೇಶದ್ರೋಹಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವವರ ಕೇಸ್‍ಗಳನ್ನು ಹಿಂಪಡೆಯುತ್ತಿದೆ. ಮತ್ತೊಂದೆಡೆ ಸ್ವಾಮೀಜಿಗಳಿಗೆ ಬೆದರಿಕೆ ಹಾಕುವುದು ಖಂಡಿತ ಸರಿಯಲ್ಲ. ಸ್ವಾಮೀಜಿಗಳ ಪರ ಇದ್ದೇವೆ ಎಂದು ತಿಳಿಸಿ, ಆಶೀರ್ವಾದ ಪಡೆದಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.
ನಗರದ ಮೈಸೂರು ರಸ್ತೆ ಬಳಿ ಇರುವ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದಲ್ಲಿ ಪರಮಪೂಜ್ಯ ಶ್ರೀ ಚಂದ್ರಶೇಖರನಾಥ ಮಹಾಸ್ವಾಮೀಜಿ ಅವರನ್ನು ಇಂದು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ವಕ್ಫ್ ವಿಚಾರದಲ್ಲಿ ಫ್ರೀಡಂ ಪಾರ್ಕಿನಲ್ಲಿ ಮೊನ್ನೆ ನಡೆದ ಹೋರಾಟದಲ್ಲಿ ಸ್ವಾಮೀಜಿಗಳು ರಾಜ್ಯ ಸರಕಾರದ ನಡವಳಿಕೆ ವಿರುದ್ಧ ಆಕ್ರೋಶಭರಿತರಾಗಿ ಹೇಳಿಕೆ ಕೊಟ್ಟಿದ್ದರು. ಆ ಹೇಳಿಕೆ ಬಗ್ಗೆ ಸ್ವಾಮೀಜಿಗಳು ಕ್ಷಮೆಯನ್ನೂ ಕೇಳಿದ್ದಾರೆ. ಇದರ ನಡುವೆ ರಾಜ್ಯ ಸರಕಾರವು ಸ್ವಾಮೀಜಿಗಳ ವಿರುದ್ಧ ಎಫ್‍ಐಆರ್ ದಾಖಲು ಮಾಡಿ ಅವರಿಗೆ ತನಿಖೆಗೆ ಬರಲು ಒತ್ತಾಯಿಸಿದೆ ಎಂದು ಆಕ್ಷೇಪಿಸಿದರು.
ಸ್ವಾಮೀಜಿಗಳು ಆರೋಗ್ಯ ಸರಿ ಇಲ್ಲದಿರುವ ಕುರಿತು ತಿಳಿಸಿದ್ದಲ್ಲದೆ ಅಗತ್ಯ ಉತ್ತರವನ್ನು ಪತ್ರ ಮೂಲಕ ನೀಡಿದ್ದರು. ಆದರೂ ಕೂಡ, ಒತ್ತಡ ಹಾಕುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು. ರಾಜ್ಯ ಸರಕಾರವು ವಕ್ಫ್ ವಿಷಯ ಮುಂದಿಟ್ಟು ರೈತರನ್ನು ಒಕ್ಕಲೆಬ್ಬಿಸುತ್ತಿದೆ; ಮಠಮಾನ್ಯಗಳ ಜಮೀನು ಕಿತ್ತುಕೊಳ್ಳುತ್ತಿದೆ. ಅಧಿಕಾರಿಗಳ ಮೂಲಕ ನೋಟಿಸ್ ಕೊಡುತ್ತಿದೆ ಎಂದು ಟೀಕಿಸಿದರು. ಇದರ ವಿರುದ್ಧ ಉಗ್ರ ಪ್ರತಿಭಟನೆ ನಡೆದಿದ್ದು, ರೈತರು ಬೀದಿಗೆ ಇಳಿದಿದ್ದಾರೆ ಎಂದು ವಿವರಿಸಿದರು.
ಬೇರೆ ಬೇರೆ ಕಾನೂನು ಇದೆಯೇ?- ಡಾ.ಸಿ.ಎನ್.ಅಶ್ವತ್ಥನಾರಾಯಣ್
ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥÀನಾರಾಯಣ್ ಅವರು ಮಾತನಾಡಿ, ಸ್ವಾಮೀಜಿಗಳು ಕ್ಷಮೆ ಕೇಳಿದರೂ ಕೇಸು ದಾಖಲಿಸಿದ್ದಾರೆ. ದೇಶವಿರೋಧಿ, ಗಲಭೆ ಎಬ್ಬಿಸುವ ಹಾಗೂ ಸೌಹಾರ್ದತೆ ಹಾಳು ಮಾಡುವ ರೀತಿಯಲ್ಲಿ ಹೇಳಿಕೆ ಕೊಟ್ಟ ಇತರರ ಬಗ್ಗೆ ಸರಕಾರ ಯಾಕೆ ಕೇಸು ಹಾಕಿಲ್ಲ? ಅವರ ಮೇಲೂ ಪ್ರಕರಣ ದಾಖಲಿಸಬೇಕಿತ್ತಲ್ಲವೇ? ಕಾನೂನು ಬೇರೆ ಬೇರೆ ಇದೆಯೇ ಎಂದು ಪ್ರಶ್ನಿಸಿದರು.