ಉಪಚುನಾವಣೆ ಬಳಿಕ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಬಿವೈ ವಿಜಯೇಂದ್ರ

Krishnaveni K

ಶನಿವಾರ, 9 ನವೆಂಬರ್ 2024 (16:54 IST)
ಬೆಂಗಳೂರು: ಉಪ ಚುನಾವಣೆಯ ಬಳಿಕ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆನ್ನುವುದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೂ ಗೊತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.

ಸಂಡೂರು ಉಪಚುನಾವಣೆ ಪ್ರಚಾರಕ್ಕೆ ಹೊರಡುವ ಮುನ್ನ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಂಡೂರಿನಲ್ಲಿ ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ಸಿನವರು 500 ರೂ. ಕೊಟ್ಟು ಜನರನ್ನು ಕರೆಸುತ್ತಿದ್ದಾರೆ ಎಂದು ಆರೋಪಿಸಿದರು. ಇದು ಟಿ.ವಿಗಳಲ್ಲಿ ಬಿತ್ತರವಾದ ಕುರಿತು ಗಮನ ಸೆಳೆದರು.

2 ದಿನಗಳ ಕಾಲ ಸಿಎಂ ಸಂಡೂರು ಪ್ರವಾಸ ನಿಗದಿಯಾಗಿತ್ತು. ಮತ್ತೆ 3 ದಿನಗಳ ಕಾಲ ವಿಸ್ತರಿಸಿದ್ದಾರೆ. ಮುಖ್ಯಮಂತ್ರಿಗಳನ್ನು ನೋಡಬೇಕು; ಅವರ ಮಾತು ಕೇಳಬೇಕು; ಅಪರಾಧಿಗಳ ಮಾತು ಕೇಳಬೇಕೆಂಬ ಆಸಕ್ತಿಯೂ ಜನರಲ್ಲಿ ಹೊರಟುಹೋಗಿದೆ ಎಂದು ವಿಶ್ಲೇಷಿಸಿದರು. ಸಿಎಂ, ಹತಾಶರಾಗಿ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದರು.

ಎಸಿಬಿ, ಲೋಕಾಯುಕ್ತ ವಿಚಾರದಲ್ಲಿ ಸಿದ್ದರಾಮಯ್ಯರಿಗೆ ಹೈಕೋರ್ಟ್ ಮಂಗಳಾರತಿ ಎತ್ತಿತ್ತು. ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಲೋಕಾಯುಕ್ತ ಬಾಗಿಲು ಹಾಕಿ ಎಸಿಬಿ ರಚಿಸಿದಾಗ ಹೈಕೋರ್ಟ್ ಮಂಗಳಾರತಿ ಎತ್ತಿತ್ತು. ಇವೆಲ್ಲ ರಾಜ್ಯದ ಜನರಿಗೆ ಗೊತ್ತಿದೆ. ಇವರ ಗೊಡ್ಡು ಬೆದರಿಕೆಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ಯಡಿಯೂರಪ್ಪನವರು ದೂರ ಉಳಿದರೆ ಹೇಗಾದರೂ ಸಂಡೂರು ಗೆಲ್ಲಬಹುದು; ಹಾಗಾದರೆ ಚನ್ನಪಟ್ಟಣ, ಶಿಗ್ಗಾಂವಿ ಗೆಲ್ಲುವ ಭ್ರಮೆಯಲ್ಲಿದ್ದಾರೆ. ಸಿಎಜಿ ವರದಿ ಆಧಾರದಲ್ಲಿ ಯಡಿಯೂರಪ್ಪನವರ ವಿರುದ್ಧ ಕೇಸುಗಳನ್ನು ದಾಖಲಿಸಿದ್ದನ್ನು ಜನರು ಮರೆತಿಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು.

ವಾಲ್ಮೀಕಿ ನಿಗಮದ ಹಗರಣ, ಮೈಸೂರು ಮುಡಾ ಹಗರಣ ಸಿದ್ದರಾಮಯ್ಯನವರ ಬುಡಕ್ಕೆ ಬಂದಿದೆ. ಸಿದ್ದರಾಮಯ್ಯನವರ ಮುಖ್ಯಮಂತ್ರಿ ಕುರ್ಚಿ ಅಲ್ಲಾಡುತ್ತಿದೆ. ಕೇಂದ್ರದ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯನವರು 5 ವರ್ಷ ಮುಖ್ಯಮಂತ್ರಿ ಎನ್ನಲು ತಯಾರಿಲ್ಲ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಕಾಂಗ್ರೆಸ್ ಸರಕಾರಗಳ ಅವಧಿಯಲ್ಲಿ ರಚಿಸಿದ ಆಯೋಗಗಳು, ಅವು ನೀಡಿದ ವರದಿಯ ವಿಚಾರ ನಮಗೆ ಮತ್ತು ರಾಜ್ಯದ ಜನತೆಗೆ ಗೊತ್ತಿದೆ. ಇದೇ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಹಿಂದೆ ಲೋಕಾಯುಕ್ತದ ಬಾಗಿಲನ್ನು ಮುಚ್ಚಿ ಹಾಕಿ, ಎಸಿಬಿ ರಚಿಸಿ ತಮ್ಮನ್ನು ತಾವು ರಕ್ಷಿಸುವ ಕೆಲಸ ಮಾಡಿಲ್ಲವೇ? ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರನ್ನು ರಕ್ಷಿಸುವ ಕೆಲಸ ಮಾಡಿಲ್ಲವೇ ಎಂದು ಕೇಳಿದರು.

ಪಾಪ ಸಿದ್ದರಾಮಯ್ಯನವರು ಮೊನ್ನೆ ಮುಡಾ ಹಗರಣದಲ್ಲಿ ಲೋಕಾಯುಕ್ತ ತನಿಖೆ ಎದುರಿಸಿದ್ದರು. ಬಹಳ ಧೈರ್ಯವಾಗಿ, ಮುಖ್ಯಮಂತ್ರಿಗಳಿಗೆ ಬೇಕಾದ ತನಿಖಾಧಿಕಾರಿಗಳು ಲೋಕಾಯುಕ್ತದಲ್ಲಿ ಇದ್ದಾರೆಂದು ಮನವರಿಕೆ ಮಾಡಿಕೊಂಡು, ಸಿದ್ದರಾಮಯ್ಯನವರು ಬಹಳ ಶೂರರಂತೆ ಮೈಸೂರಿನಲ್ಲಿ ತನಿಖೆ ಎದುರಿಸಿ ಬಂದಿದ್ದಾರೆ. ಸಿದ್ದರಾಮಯ್ಯನವರಾಗಲೀ, ಕಾಂಗ್ರೆಸ್ ಸರಕಾರವಾಗಲಿ ತಮ್ಮ ಸರಕಾರವನ್ನು, ತಮ್ಮ ಸಚಿವರು, ಶಾಸಕರನ್ನು ಯಾವ್ಯಾವ ಸಂದರ್ಭದಲ್ಲಿ ರಕ್ಷಣೆ ಮಾಡಿಕೊಳ್ಳಬೇಕೋ, ಅದಕ್ಕೆ ಬೇಕಾದ ಆಯೋಗ ರಚಿಸುವುದರಲ್ಲಿ ನಿಸ್ಸೀಮರಿದ್ದಾರೆ ಎಂದು ತಿಳಿಸಿದರು.

ಎದುರಾಳಿಗಳನ್ನು ರಾಜಕೀಯವಾಗಿ ಮುಗಿಸಲು ಬೇಕಾದ ತಂತ್ರ ಮಾಡುವ ವಿಚಾರದಲ್ಲೂ, ಅದಕ್ಕಾಗಿ ಆಯೋಗ ರಚನೆ, ಯಾವ ರೀತಿ ವರದಿ ಕೊಡಬೇಕೆಂಬ ವಿಷಯದಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು ಎಂದು ಟೀಕಿಸಿದರು. ಬಿಜೆಪಿ, ಯಡಿಯೂರಪ್ಪನವರಾಗಲೀ, ಈ ರೀತಿ ತನಿಖಾ ವರದಿಗಳಿಂದ ಹೆದರಿ ಓಡಿ ಹೋಗುವ ಪ್ರಶ್ನೆ ಇಲ್ಲ ಎಂದು ಸವಾಲು ಹಾಕಿದರು.

ಹಿಂದೆ ಯಡಿಯೂರಪ್ಪನವರ ವಿರುದ್ಧ ಅನೇಕ ಬಾರಿ ಷಡ್ಯಂತ್ರಗಳು ನಡೆದಿವೆ. ಬಹುಶಃ ಕರ್ನಾಟಕ ರಾಜ್ಯದಲ್ಲಿ ಯಡಿಯೂರಪ್ಪನವರ ವಿರುದ್ಧ ನಡೆದಷ್ಟು ಕುತಂತ್ರ, ಷಡ್ಯಂತ್ರಗಳು ಬೇರೆ ಯಾವ ರಾಜಕಾರಣಿ ವಿರುದ್ಧ ನಡೆದಿರಲು ಸಾಧ್ಯವಿಲ್ಲ; ಇವೆಲ್ಲವನ್ನೂ ಕೂಡ ಚಕ್ರವ್ಯೂಹದಂತೆ ಭೇದಿಸಿ ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಗಳಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ವಿವರಿಸಿದರು.

ಸಿದ್ದರಾಮಯ್ಯನವರು ಹತಾಶರಾಗಿದ್ದಾರೆ. 3 ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಸೋಲಿನ ದವಡೆಯಲ್ಲಿ ಸಿದ್ದರಾಮಯ್ಯರ ಸರಕಾರ ಸಿಲುಕಿದೆ; 3 ಕ್ಷೇತ್ರಗಳಲ್ಲೂ ಸೋಲಾದರೆ ಸಿಎಂ ಬುಡಕ್ಕೆ ಬರುತ್ತದೆ ಎಂಬ ಅರಿವು, ಸತ್ಯ ಗೊತ್ತಾಗಿದೆ. ಅದಕ್ಕಾಗಿ ಕುನ್ಹ ವರದಿಯನ್ನು ಆತುರಾತುರವಾಗಿ ತೆಗೆದುಕೊಳ್ಳುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು. 
 
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ