ಪೊಲೀಸ್ ಲಾಠಿ ಚಾರ್ಜ್ -ಸಿ. ಟಿ.ರವಿ ಆಕ್ರೋಶ

ಮಂಗಳವಾರ, 1 ಫೆಬ್ರವರಿ 2022 (15:51 IST)
ಬೆಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಸೋಮವಾರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ (ABVP) ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದು ಖಂಡನೀಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ವಿದ್ಯಾರ್ಥಿಗಳು ಎಂದರೆ ಈ ದೇಶದ ಶಕ್ತಿ. ಅದರಲ್ಲೂ ಎಬಿವಿಪಿ ಸಂಘಟನೆಯು ವಿದ್ಯಾರ್ಥಿಗಳಿಗೆ ಅನ್ಯಾಯವಾದಾಗ ಅವರಿಗೆ ಸೂಕ್ತ ಪ್ರಾತಿನಿಧ್ಯ ಕೊಡುವಲ್ಲಿ ತನ್ನ ಸಂಘಟನಾ ಶಕ್ತಿಯನ್ನು ನ್ಯಾಯಯುತವಾಗಿ ತೋರಿಸುತ್ತಿದೆ. ಬೆಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳ ಅಂಕಪಟ್ಟಿ, ಹಾಸ್ಟೆಲ್ ಸಮಸ್ಯೆ, ಪದವಿ ಪರೀಕ್ಷೆ, ಮೌಲ್ಯಮಾಪನ ಮತ್ತು ಫಲಿತಾಂಶ ನೀಡುವಲ್ಲಿ ವಿಶ್ವವಿದ್ಯಾನಿಲಯ ವಿಳಂಬ ಮಾಡಿದೆ. ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ಮಾಡುವ ವೇಳೆ ಪೊಲೀಸರು ಲಾಠಿ ಚಾರ್ಚ್ ಮಾಡಿದ್ದಾರೆ ಎಂಬ ಸುದ್ದಿ ತಿಳಿದು ನೋವಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
 
ಎಬಿವಿಪಿ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ವಿಶ್ವ ವಿದ್ಯಾನಿಲಯದ ಪಟ್ಟಭದ್ರ ಹಿತಾಸಕ್ತಿಗಳ ಗುಂಪು ಏಕಾಏಕಿ ಮುಗಿಬಿದ್ದಾಗ ಪೊಲೀಸರ ಸಂಯಮ ಕಳೆದುಕೊಂಡು ವರ್ತಿಸಿದ್ದಾರೆ. ಈ ದೌರ್ಜನ್ಯ ನೋವಿನ ಸಂಗತಿ. ಎಲ್ಲಿ ಪೆನ್ನಿನ ಮಸಿ ಮೂಡಬೇಕಿತ್ತೊ ಅಲ್ಲಿ ರಕ್ತದ ಕಲೆಗಳು ಬಿದ್ದಿವೆ. ಇದು ನಮ್ಮ ಸಂಸ್ಕೃತಿ ಅಲ್ಲ. ವಿದ್ಯಾರ್ಥಿಗಳು ತಮ್ಮ ನ್ಯಾಯಯುತವಾದ ಬೇಡಿಕೆಗಳನ್ನು ಕೇಳುವುದು ಅವರ ಹಕ್ಕು. ಅವರ ಬೇಡಿಕೆಗಳನ್ನು ಕೇಳುವುದು ವಿವಿಯ ಆದ್ಯ ಕರ್ತವ್ಯ. ವಿಶ್ವವಿದ್ಯಾನಿಲಯದ ಆಡಳಿತ ವ್ಯವಸ್ಥೆ ಅದಕ್ಕೆ ಸ್ಪಂದಿಸುವುದು ಅದರ ಕಾರ್ಯ. ಪ್ರತಿಭಟನೆ ಮಾಡಲು ವಿದ್ಯಾರ್ಥಿಗಳು ಕಾನೂನು ಪ್ರಕಾರವೇ ಪೊಲೀಸ್ ಇಲಾಖೆಯಿಂದ ಒಪ್ಪಿಗೆ ಪಡೆದಿದ್ದರೂ ಪ್ರತಿಭಟನಾ ನಿರತ ಎಬಿವಿಪಿ ಸಂಘಟನೆಯ ವಿದ್ಯಾರ್ಥಿಗಳ ಮೇಲೆ ಅಮಾನವೀಯವಾಗಿ ರಕ್ತ ಬರುವಂತೆ ಹಲ್ಲೆ ಮಾಡಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ