ಬಿಗ್ ನ್ಯೂಸ್- ಕಾವೇರಿ ನೀರು ವಿವಾದ; ರಾಜ್ಯಕ್ಕೆ ಕೊಂಚ ರಿಲೀಫ್
ಮಂಗಳವಾರ, 25 ಜೂನ್ 2019 (16:24 IST)
ಮಹತ್ವದ ಬೆಳವಣಿಗೆಯೊಂದರಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಸೂಚನೆಯಿಂದ ಕರ್ನಾಟಕ ರಾಜ್ಯ ನಿರಾಳವಾದಂತೆ ಆಗಿದೆ.
ಮಳೆ ಅಧಿಕವಾಗಿ ಸುರಿದು ಕಾವೇರಿ ಜಲಾಶಯಕ್ಕೆ ನೀರು ಹರಿದುಬಂದರೆ ಮಾತ್ರ ತಮಿಳುನಾಡಿಗೆ ಕಾವೇರಿ ನೀರನ್ನು ಬಿಡಬೇಕು. ಹೀಗಂತ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಸೂಚನೆಗೆ ರಾಜ್ಯ ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
ಜನ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಹೀಗಾಗಿ ನೀರಿನ ಸಮಸ್ಯೆ ತಲೆದೋರಿದೆ ಎಂಬ ವಾಸ್ತವ ಅಂಶವನ್ನು ಕರ್ನಾಟಕ ಮಾಡಿರುವ ವಾದಕ್ಕೆ ಪ್ರಾಧಿಕಾರವು ಪುರಸ್ಕಾರ ಮಾಡಿದೆ.
ನವದೆಹಲಿಯಲ್ಲಿ ಕರ್ನಾಟಕ, ತಮಿಳುನಾಡು, ಪುದುಚೇರಿ ಮತ್ತು ಕೇರಳ ರಾಜ್ಯ ಮತ್ತು ಕೇಂದ್ರ ಸರಕಾರದ ಪ್ರತಿನಿಧಿಗಳನ್ನು ಒಳಗೊಂಡ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಮಸೂದ್ ಹುಸೇನ್ ಈ ಸೂಚನೆಯನ್ನು ನೀಡಿದ್ದಾರೆ.
ಜೂನ್ ನಲ್ಲಿ ಕರ್ನಾಟಕ 9.19 ಟಿಎಂಸಿ ಪೈಕಿ 1.72 ಟಿಎಂಸಿ ನೀರು ಬಿಟ್ಟಿದೆ. ಉಳಿದ 7.47 ಟಿಎಂಸಿ ನೀರು ಬಿಟ್ಟಿಲ್ಲ. ಜುಲೈನ ಪಾಲು 31.24 ಟಿಎಂಸಿ ನೀರನ್ನೂ ಕರ್ನಾಟಕದಿಂದ ಬಿಡಿಸಬೇಕೆಂದು ತಮಿಳುನಾಡು ಪ್ರಾಧಿಕಾರಕ್ಕೆ ಮನವಿ ಮಾಡಿತ್ತು.